ಮನೆ ಕಾನೂನು ವಾಹನಗಳ ನಂಬರ್ ಪ್ಲೇಟ್ ಬದಲಿಸದಿದ್ದರೆ ದಂಡ: ನವೆಂಬರ್ 17 ಕಡೇ ದಿನ

ವಾಹನಗಳ ನಂಬರ್ ಪ್ಲೇಟ್ ಬದಲಿಸದಿದ್ದರೆ ದಂಡ: ನವೆಂಬರ್ 17 ಕಡೇ ದಿನ

0

ಬೆಂಗಳೂರು: ವಾಹನಗಳ ಹಳೇ ನಂಬರ್‌ಪ್ಲೇಟ್‌ ಬದಲಾಯಿಸಿ ಅತಿಸುರಕ್ಷಿತ ನೋಂದಣಿ ಫಲಕ (ಎಚ್‌ ಎಸ್‌ ಆರ್‌ ಪಿ) ಅಳವಡಿಸುವುದನ್ನು ಸಾರಿಗೆ ಇಲಾಖೆ ಕಡ್ಡಾಯಗೊಳಿಸಿದೆ.

Join Our Whatsapp Group

2019ರ ಏ.1ರ ನಂತರ ನೋಂದಣಿಯಾಗಿರುವ ವಾಹನಗಳಲ್ಲಿ ಎಚ್‌ ಎಸ್‌ ಆರ್‌ ಪಿ ನಂಬರ್‌ ಪ್ಲೇಟ್‌ ಇದ್ದು, ಅದಕ್ಕಿಂತ ಹಿಂದಿನ ವಾಹನಗಳಿಗೆ ಹೊಸ ನಂಬರ್‌ ಪ್ಲೇಟ್‌ ಅಳವಡಿಸಲು ನವೆಂಬರ್‌ 17ರವರೆಗೆ ಅವಕಾಶ ನೀಡಲಾಗಿದೆ. ಅಪರಾಧ ಕಡಿಮೆ ಮಾಡಲು, ವಾಹನಗಳನ್ನು ಸುಲಭದಲ್ಲಿ ಪತ್ತೆ ಹಚ್ಚಲು, ನಕಲಿ ನಂಬರ್‌ಗಳನ್ನು ತಡೆಗಟ್ಟಲು ಎಚ್‌ಎಸ್‌ ಆರ್‌ ಪಿ ಅಳವಡಿಸುವುದು ಅಗತ್ಯ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು 2001ರಲ್ಲಿಯೇ ತಿಳಿಸಿತ್ತು. ಆದರೆ, ಜಾರಿಯಾಗಿರಲಿಲ್ಲ. 2018ರ ಡಿ.4ರಂದು ಸಿಎಂವಿಆರ್‌ ಕಾಯ್ದೆಗೆ ತಿದ್ದುಪಡಿ ಮಾಡಿ ಇನ್ನು ಮುಂದೆ ತಯಾರಿಸುವ ಎಲ್ಲ ವಾಹನಗಳಿಗೆ ಅತಿಸುರಕ್ಷಿತ ನೋಂದಣಿ ಫಲಕ ಕಡ್ಡಾಯ ಗೊಳಿಸಲಾಯಿತು. ಇದು 2019ರ ಏ.1ರಿಂದ ಜಾರಿಗೆ ಬಂತು.

ಅದಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಲ್ಲಿ ಹಳೇ ನಂಬರ್‌ ಪ್ಲೇಟ್‌ ಗಳೇ ಇವೆ. ಕರ್ನಾಟಕದಲ್ಲಿಯೂ ಸುಮಾರು 2 ಕೋಟಿ ವಾಹನಗಳು ಹಳೇ ನಂಬರ್‌ ಪ್ಲೇಟ್‌ ಹೊಂದಿವೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ 1.40 ಕೋಟಿ ದ್ವಿಚಕ್ರ ವಾಹನಗಳು, 40 ಲಕ್ಷ ಲಘು ವಾಹನಗಳು ಹಾಗೂ ಸುಮಾರು 20 ಲಕ್ಷ ಸಾರಿಗೆ ವಾಹನಗಳಾಗಿವೆ. ಈ ವಾಹನಗಳು ಅತಿಸುರಕ್ಷಿತ ನೋಂದಣಿ ಫಲಕ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಈಗ ಕಡ್ಡಾಯಗೊಳಿಸಿದೆ.

ಬದಲಾವಣೆ ಹೇಗೆ?:

ವಾಹನ ಮಾಲೀಕರು ಶೋರೂಂ ಅಥವಾ ಡೀಲರ್‌ಗಳಲ್ಲಿ ನಂಬರ್‌ ಪ್ಲೇಟ್‌ ಬದಲಾವಣೆಗೆ ಕೋರಿಕೆ ಸಲ್ಲಿಸಬೇಕು. ನಾಲ್ಕು ಚಕ್ರದ ವಾಹನಗಳಿಗೆ ₹ 400–₹ 500 ವರೆಗೆ ಹಾಗೂ ದ್ವಿಚಕ್ರ ವಾಹನಗಳಿಗೆ ₹ 250–₹ 300ವರೆಗೆ ಶುಲ್ಕವಿದ್ದು, ಅದನ್ನು ಪಾವತಿ ಮಾಡಬೇಕು. ಒಇಎಂನಿಂದ (ಒರಿಜಿನಲ್‌ ಇಕ್ಯುಪ್‌ ಮೆಂಟ್‌ ಮ್ಯಾನುಫ್ಯಾಕ್ಚರರ್‌) ಅಧಿಕೃತ ಪೋರ್ಟಲ್‌ನಲ್ಲಿ ನಮೂದಿಸಿದ ಮೇಲೆ ಎಚ್‌ ಎಸ್‌ ಆರ್‌ಪಿ ಅಳವಡಿಸಲಾಗುತ್ತದೆ.

ಎಚ್‌ಎಸ್‌ಆರ್‌ಪಿ ಅಳವಡಿಸಿದ ಬಳಿಕ ವಾಹನದ ಮೇಲೆ ಲೇಸರ್ ಕೋಡ್ ಅನ್ನು ವಾಹನ್‌ (ವಿಎಎಚ್‌ ಎಎನ್‌) ಪೋರ್ಟಲ್‌ ನಲ್ಲಿ ನವೀಕರಿಸಲಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

ನೋಂದಣಿ ಪ್ರಮಾಣ ಪತ್ರ (ಆರ್‌ ಸಿ), ಕಾರ್ಯಕ್ಷಮತೆ ಪ್ರಮಾಣ ಪತ್ರ (ಎಫ್‌ ಸಿ) (ಸಾರಿಗೆ ವಾಹನಗಳಿಗೆ ಮಾತ್ರ) ಇಲ್ಲದ ವಾಹನಗಳಿಗೆ ಹಾಗೂ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಹನಗಳಿಗೆ ಎಚ್‌ ಎಸ್‌ ಆರ್‌ ಪಿ ಅಳವಡಿಸಲು ಅವಕಾಶ ನೀಡುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.