ವ್ಯಾಯಾಮ ಮಾಡುವುದು ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಉತ್ತಮ ಮಾರ್ಗ. ವ್ಯಾಯಾಮ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ಭಾರೀ ಲಾಭವಿದೆ. ನೀವು ಅನುಭವಿಸಿರಬಹುದು, ವ್ಯಾಯಾಮ ಮಾಡಿದ ಬಳಿಕ ಒಂದು ರೀತಿಯ ಖುಷಿಯ ಅಲೆ ಮನಸ್ಸನ್ನು ಆವರಿಸಿ ಇರುತ್ತದೆ. ಇದಕ್ಕೆ ವ್ಯಾಯಾಮದ ಬಳಿಕ ಬಿಡುಗಡೆಯಾಗುವ ಖುಷಿಯ ಹಾರ್ಮೋನ್ ಕಾರಣವಾಗಿರುತ್ತದೆ. ಅಂದರೆ, ವ್ಯಾಯಾಮ ಮಾಡಿದಾಗ ಖುಷಿಯನ್ನುಂಟು ಮಾಡುವ ಹಾರ್ಮೋನ್ ಬಿಡುಗಡೆಯಾಗುತ್ತದೆ. ಆದರೆ, ಕೆಲವೊಮ್ಮೆ ಮಾತ್ರ ವ್ಯಾಯಾಮ ನೋವನ್ನು ತರಬಲ್ಲದು. ಆ ಸಮಯದಲ್ಲಾಗುವ ಕೆಲವು ಗಾಯದಿಂದ ಮಾಂಸಖಂಡಗಳಿಗೆ ಏಟಾಗಿ ನೋವಾಗಬಹುದು. ನರಗಳಿಗೆ ಹಾನಿಯಾಗಬಹುದು. ದೇಹದೊಳಗೆ ಆಂತರಿಕವಾಗಿ ಗಾಯವಾದಾಗ ಮಾಂಸಖಂಡಗಳು ಶಾಶ್ವತವಾಗಿ ಹಾನಿಗೆ ಒಳಗಾಗಬಹುದು. ಹೀಗಾಗಿ, ವ್ಯಾಯಾಮ ಮಾಡುವ ಮುನ್ನ ಕೆಲವು ಕ್ರಮಗಳನ್ನು ಅನುಸರಿಸಬೇಕು. ಸರಳ ವ್ಯಾಯಾಮ, ಕೈಕಾಲು ಆಡಿಸುವುದು ಸೇರಿದಂತೆ ಬಾಡಿ ವಾರ್ಮ್ ಅಪ್ ಕ್ರಿಯೆಗಳೊಂದಿಗೆ ಕೆಲವು ಪದ್ಧತಿಗಳನ್ನು ಅನುಸರಿಸಿದರೆ ವ್ಯಾಯಾಮದ ಸಮಯದಲ್ಲಾಗುವ ನೋವಿನಿಂದ ಬಚಾವಾಗಬಹುದು. ಇವುಗಳ ಮೂಲಕ ದೇಹವನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸಬಹುದು. ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಆಗಿರುವ ರುಜಾತಾ ದಿವೇಕರ್ ಅವರು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿರುವುದು ಗಮನ ಸೆಳೆಯುತ್ತದೆ.
• ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಬೇಡ
ಬಹಳಷ್ಟು ಜನ ಬೆಳಗಿನ ಹೊತ್ತು ವ್ಯಾಯಾಮ ಮಾಡುತ್ತಾರೆ. ಹೀಗಾಗಿ, ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ, ವ್ಯಾಯಾಮ ಮಾಡುವುದು ಸಾಮಾನ್ಯ. ಆದರೆ, ಎದ್ದ ಬಳಿಕ ಹಾಗೆಯೇ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಶಕ್ತಿ ಸಾಲದು ಎನಿಸಬಹುದು ಅಥವಾ ಸುಸ್ತಾಗಬಹುದು. ಹೀಗಾಗಿ, ವ್ಯಾಯಾಮಕ್ಕೂ 15 ನಿಮಿಷಗಳ ಮುನ್ನ ಒಂದು ಬಾಳೆಹಣ್ಣು ಅಥವಾ ಯಾವುದಾದರೂ ಹಣ್ಣನ್ನುಸ್ವಲ್ಪ ಸೇವಿಸಬೇಕು.
• ವಾರ್ಮ್ ಅಪ್ ಮರೀಬೇಡಿ
ಹೆಚ್ಚಿನ ಸಮಯವಿಲ್ಲವೆಂದು, ಗಡಿಬಿಡಿಯಲ್ಲಿ ಸೀದಾ ವರ್ಕೌಟ್ ಆರಂಭಿಸಿದರೆ ಮಾಂಸಖಂಡಗಳಿಗೆ ಹಾನಿಯಾಗುತ್ತದೆ, ಗಾಯವಾಗುತ್ತದೆ. ಹೀಗಾಗಿ, ಕನಿಷ್ಠ 10 ನಿಮಿಷಗಳ ಕಾಲ ದೇಹವನ್ನು ಹಿಗ್ಗಿಸುವ, ಮುಂದಿನ ಚಟುವಟಿಕೆಗಳಿಗೆ ದೇಹವನ್ನು ಸಿದ್ಧಪಡಿಸುವ ವಾರ್ಮ್ ಅಪ್ ಕ್ರಿಯೆಗಳನ್ನು ಮಾಡಬೇಕು. ಮಾಂಸಖಂಡಗಳು ಮತ್ತು ಕೀಲುಗಳನ್ನು ವಾರ್ಮ್ ಅಪ್ ಮಾಡುವುದು ತೂಕ ಕಳೆದುಕೊಳ್ಳಲು ಅನುಕೂಲ. ಈ ಕ್ರಿಯೆ ಮಾಂಸಖಂಡಗಳಿಗೆ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಯಪಡಿಸುವಂಥದ್ದು.
• ದಿನವೂ ಒಂದೇ ರೀತಿಯ ಚಟುವಟಿಕೆ ಬೇಡ
ದಿನವೂ ಒಂದೇ ರೀತಿಯ ಚಟುವಟಿಕೆ ಮಾಡುವುದರಿಂದ ದೇಹಕ್ಕೆ ಅದೇ ಅಭ್ಯಾಸವಾಗಿ ಬಿಡುತ್ತದೆ. ಹೀಗಾಗಿ, ಇಂದು ಯೋಗ ಮಾಡಿದರೆ ನಾಳೆ ವಾಕಿಂಗ್ ಬೆಸ್ಟ್. ದಿನವೂ ವಿಭಿನ್ನ ರೀತಿಯ ವ್ಯಾಯಾಮ ಮಾಡುವುದರಿಂದ ದೇಹ ಹೆಚ್ಚು ಫ್ಲೆಕ್ಸಿಬಲ್ ಆಗಿರುತ್ತದೆ.
• ವಾರದಲ್ಲಿ ಒಂದು ದಿನ ರಜಾ
ದಿನವೂ ವ್ಯಾಯಾಮ ಮಾಡುವುದು ಬೇಕಾಗಿಲ್ಲ. ವಾರಕ್ಕೆ ಒಂದು ದಿನ ರೆಸ್ಟ್ ಮಾಡುವುದು ಉತ್ತಮ. ಮಾಂಸಖಂಡಗಳಿಗೆ ಉಂಟಾಗುವ ಶ್ರಮದಿಂದ ಸುಧಾರಿಸಿಕೊಳ್ಳಲು ಹಾಗೂ ಗಾಯವನ್ನು ತಪ್ಪಿಸಲು ವಾರಕ್ಕೆ ಒಂದು ದಿನವಾದರೂ ವ್ಯಾಯಾಮದಿಂದ ದೂರವಿರಬೇಕು. ಅಲ್ಲದೆ, ಈಗಿನ್ನೂ ವ್ಯಾಯಾಮ ಮಾಡಲು ಹೊರಟಿರುವವರು, ಮೊದಲಿಗೆ ವಾರಕ್ಕೆ 2-3 ದಿನದಂತೆ ಅಭ್ಯಾಸ ಮಾಡಿಕೊಳ್ಳಬೇಕು. ಬಳಿಕ, ನಿಧಾನವಾಗಿ ಸಮಯದ ಅವಧಿಯನ್ನು ಹೆಚ್ಚಿಸಬೇಕು. ದೇಹಕ್ಕೆ ಅಗತ್ಯ ಆರೈಕೆ, ವಿಶ್ರಾಂತಿ ಬೇಕು ಎನಿಸಿದಾಗ ಬಲವಂತವಾಗಿ ವ್ಯಾಯಾಮ ಮಾಡಬಾರದು. ಉದಾಹರಣೆಗೆ, ಜ್ವರ ಬಂದ ಮಾರನೆಯ ದಿನ ವ್ಯಾಯಾಮ ಮಾಡುವುದರಿಂದ ಹಾನಿಯೇ ಹೆಚ್ಚು. ವ್ಯಾಯಾಮ ಮಾಡುವಾಗ ಯಾವುದೇ ಕಾರಣಕ್ಕೂ ನೋವು ಎನಿಸಬಾರದು.