ಬೆಂಗಳೂರು: ವಿನಾಕಾರಣ ನಮ್ಮ ಪಕ್ಷದ ಮೇಲೆ ದೂರು ಹಾಕುವ ಕೆಲಸ ನಡೆಯುತ್ತಿದೆ. ನಾವೇನು ಮುಚ್ಚುಮರೆ ಮಾಡುತ್ತಿಲ್ಲ. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಜಾತ್ಯತೀತ ತತ್ವಗಳನ್ನು ಗಾಳಿಗೆ ತೂರಿದೆ ಎನ್ನುವ ಆರೋಪ ಸರಿಯಲ್ಲ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಅವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಉಪಸ್ಥಿತರಿದ್ದ ಈ ಗೋಷ್ಠಿಯಲ್ಲಿ ಮಾಜಿ ಪ್ರಧಾನಿಗಳು ಹಲವು ಗಂಭೀರ ವಿಷಯಗಳನ್ನು ಹಂಚಿಕೊಂಡರು.
ಬಿಜೆಪಿ ಜತೆ ಮೈತ್ರಿಗೆ ಸ್ವತಃ ನಾನೇ ಒಪ್ಪಿಗೆ ನೀಡಿದ್ದೇನೆ. ನಾನೇ ಈ ಮೈತ್ರಿಗೆ ಅನುಮತಿ ಕೊಟ್ಟಿದ್ದೇನೆ. ನಮ್ಮ ಪಕ್ಷದ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಆಬಿಫ್ರಾಯ ಪಡೆದೇ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮಾಜಿ ಪ್ರಧಾನಿಗಳು ಒತ್ತಿ ಹೇಳಿದರು.
ಕದ್ದುಮುಚ್ಚಿ ಮಾತನಾಡಿಲ್ಲ:
ನಾವು ಜಾತ್ಯಾತೀತ ಸಿದ್ಧಾಂತವನ್ನು ಗಾಳಿಗೆ ತೂರುವ ರಾಜಕಾರಣವನ್ನು ಯಾವತ್ತೂ ಮಾಡಿಲ್ಲ. ಬಿಜೆಪಿ ನಾಯಕರ ಜೊತೆ ಕದ್ದುಮುಚ್ಚಿ ಮಾತನಾಡುವ ಅವಶ್ಯಕತೆ ನಮಗಿಲ್ಲ. ಕಳೆದ ಅರವತ್ತು ವರ್ಷಗಳಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಟ್ಟಿಲ್ಲ. ಮುಂದೆಯೂ ನಾವು ಎಲ್ಲರ ಪರವಾಗಿ ಇರುತ್ತೇವೆ ಎಂದು ಅವರು ಹೇಳಿದರು.
ಅನಗತ್ಯವಾಗಿ ಮೈತ್ರಿಯಲ್ಲಿ ತಪ್ಪು ಹುಡುಕುವ ವ್ಯರ್ಥ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ ಅವರು; ರಾಜ್ಯದಲ್ಲಿ ನಮ್ಮ ಬಿಜೆಪಿ ಸರಕಾರ ಬರಲು ಅವಕಾಶ ಮಾಡಿಕೊಟ್ಟಿದ್ದು ಯಾರು? ಕಾಂಗ್ರೆಸ್ ಪಕ್ಷದ ನಾಯಕರಾದ ಗುಲಾಂ ನಭಿ ಅಜಾದ್, ರಾಜಾಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಸೇರಿ ಎಲ್ಲರೂ ಒತ್ತಡ ಹೇರಿ 2018ರಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಯಾವ ಕಾರಣಕ್ಕೂ ನಿಮ್ಮ ಸಹವಾಸ ಬೇಡ ಎಂದು ನಾನು ಕಾಂಗ್ರೆಸ್ ನಾಯಕರಿಗೆ ಹೇಳಿದ್ದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜತೆ ಮೈತ್ರಿ ಯಾಕೆ ಅಂತ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಪಾರ್ಥ ಕಲ್ಪಿಸಿ ರಾಜ್ಯಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಆದರೆ, ರಾಜಕೀಯ ಬೆಳವಣಿಗೆ, ಪಕ್ಷದ ಹಿತದೃಷ್ಟಿಯಿಂದ ಕೆಲವು ಹೆಜ್ಜೆಗಳನ್ನು ಇಟ್ಟಿದ್ದೇವೆ. ಜೆಡಿಎಸ್ ಬಗ್ಗೆ ಲಘುವಾಗಿ ಯಾರೂ ಮಾತನಾಡುವುದು ಬೇಡ. ಇದು ಅವಕಾಶವಾದಿ ರಾಜಕಾರಣ ಅಲ್ಲ. ಪಕ್ಷ ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ:
ನಾನು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮಾತಾಡಿದ್ದೇನೆ. ಕರ್ನಾಟಕ ರಾಜ್ಯದ ಪರಿಸ್ಥಿತಿ ಏನಿದೆ ಎಂಬುದರ ಬಗ್ಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಜತೆ ಮಾತಾಡಿದ್ದೇನೆ. ಏನೆಲ್ಲಾ ನಡೆಯಿತು, ಏನೇನು ಆಗುತ್ತಿದೆ ಎಂಬುದನ್ನು ಪಕ್ಷದ ಎಲ್ಲಾ ಸಭೆಗಳಲ್ಲಿ ಎಲ್ಲಾ ನಾಯಕರ ಗಮನಕ್ಕೆ ತಂದಿದ್ದೇವೆ. ಯಾವುದೇ ಸಮುದಾಯಕ್ಕೆ ಈ ಪಕ್ಷದಿಂದ ಅನ್ಯಾಯ ಆಗಲು ಬಿಟ್ಟಿಲ್ಲ. ಆದರೆ, ಇವತ್ತು ಯಾಕೆ ಹೀಗಾಯಿತು? ಕುಮಾರಸ್ವಾಮಿ ಅವರ ಸರಕಾರ ತೆಗೆದಿದ್ದು ಯಾರು? ಹದಿನೇಳು ಜನ ಶಾಸಕರನ್ನು ಮುಂಬಾಯಿಗೆ ಕಳಿಸಿಕೊಟ್ಟಿದ್ದು ಯಾರು? ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಪ್ರಧಾನಿಗಳು ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ ಗೆ ನೈತಿಕತೆ ಇಲ್ಲ:
ಬಾಯಿಮಾತಿನಲ್ಲಿ ಜಾತ್ಯತೀತ ತತ್ವವನ್ನು ಹೇಳುತ್ತಿರುವ ಕಾಂಗ್ರೆಸ್ ಇತಿಹಾಸದ ಉದ್ದಕ್ಕೂ ಮಾಡಿದ್ದು ಜಾತ್ಯತೀತತೆ ಅಪಚಾರವನ್ನೇ. ಕರ್ನಾಟಕದಲ್ಲಿಯೇ ಅದಕ್ಕೆ ಅನೇಕ ಉದಾಹರಣೆಗಳು ಇವೆ. ಬಿ.ಎಂ. ಫಾರೂಕ್ ಅವರನ್ನು ರಾಜ್ಯಸಭೆ ಚುನಾವಣೆಗೆ ನಿಲ್ಲಿಸಿದೆವು. ಅವರ ಸೋಲಿಗೆ ಕಾರಣ ಆಗಿದ್ದು ಯಾರು? ಆಮೇಲೆ ಕುಪ್ಪೇಂದ್ರ ರೆಡ್ಡಿ ಅವರನ್ನು ಸೋಲಿಸಿದವರು ಯಾರು? ಕಾಂಗ್ರೆಸ್ ನಾಯಕರೇ ಅದನ್ನೆಲ್ಲ ಮಾಡಿದ್ದು ಎನ್ನುವುದು ಗೊತ್ತಿಲ್ಲವೇ? ಆಗ ಇವರೆಲ್ಲರಿಗೂ ಜಾತ್ಯತೀತತೆ ನೆನಪು ಇರಲಿಲ್ಲವೇ? ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎನ್ನುವ ಇವರಿಗೆ ಯಾವ ನೈತಿಕತೆ ಇದೆ ಎಂದು ಮಾಜಿ ಪ್ರಧಾನಿಗಳು ಖಾರವಾಗಿ ಪ್ರಶ್ನಿಸಿದರು.
ಮೈತ್ರಿಯಿಂದ ಯಾವ ಸಮಸ್ಯೆಯೂ ಇಲ್ಲ:
ಮೈತ್ರಿಯಿಂದ ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅದರ ಬಗ್ಗೆ ಯಾರಿಗೂ ಕಳವಳ ಬೇಕಿಲ್ಲ. ಅಮಿತ್ ಶಾ, ಜೆ.ಪಿ.ನಡ್ಡಾ ಅವರ ಜತೆ ಚರ್ಚೆ ಆಗಿದೆ. ಪ್ರಧಾನಿಗಳ ಜತೆ ಇನ್ನೂ ಮಾತುಕತೆ ಆಗಿಲ್ಲ. ಬಿಜೆಪಿ ಜತೆ ನೇರವಾಗಿ ಅಥವಾ ಪರೋಕ್ಷವಾಗಿ ಮಡಿವಂತಿಕೆ ಕಾಪಾಡಿಕೊಂಡಿರುವ ಒಂದು ಪಕ್ಷ ಇದ್ದರೆ ತೋರಿಸಿ ಈ ದೇಶದಲ್ಲಿ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಬೇಕು ಎಂದು ಬಿಜೆಪಿ ಜತೆ ಎಡಪಕ್ಷಗಳ ಕೆಲ ಮುಖಂಡರು ಕೆಲಸ ಮಾಡಿದ್ದು ನಮಗೂ ಗೊತ್ತಿದೆ ಎಂದು ಮಾಜಿ ಪ್ರಧಾನಿಗಳು ಖಾರವಾಗಿ ನುಡಿದರು.
ನಮ್ಮ ಪಕ್ಷಕ್ಕೆ ಈ ಮೈತ್ರಿಯಿಂದ ಧಕ್ಕೆ ಆಗುವುದಿಲ್ಲ. ಯಾರೂ ಪಕ್ಷ ತೊರೆಯುವುದಿಲ್ಲ. ಕರೆದು ಮಾತನಾಡುತ್ತೇನೆ. ಹೆಚ್.ಡಿ.ಕುಮಾರಸ್ವಾಮಿ ತಿಂಗಳು ಪಂಚರತ್ನ ರಥಯಾತ್ರೆ ನಡೆಸಿದ್ದರು. ಜಲಧಾರೆ ಕಾರ್ಯಕ್ರಮ ನೀಡಿದ್ದರು. ಆದರೆ ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ಅದಕ್ಕೆ ನಾವೇನೂ ಹೆದರುವ ಅವಶ್ಯಕತೆ ಇಲ್ಲ ಎಂದರು ಅವರು.
ದೇವದುರ್ಗ ಶಾಸಕಿ ಕರೆಮ್ಮ ನಾಯಕ ಅವರು ಮಂಗಳವಾರ ರಾತ್ರಿ ನನಗೆ ದೂರವಾಣಿ ಕರೆ ಮಾಡಿದ್ದರು. ನಿಮ್ಮಿಂದ ಮತ್ತು ಕುಮಾರಸ್ವಾಮಿ ಅವರಿಂದ ನನ್ನನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನೀವಿಬ್ಬರೂ ಬದುಕಿರುವ ತನಕ ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ, ಅವರ ಕುಯುಕ್ತಿ ಫಲಿಸುವುದಿಲ್ಲ ಎಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಬಿ.ಎಂ.ಫಾರೂಕ್, ಮಂಜೇಗೌಡ, ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಮುಂತಾದವರು ಉಪಸ್ಥಿತರಿದ್ದರು.