ಮನೆ ರಾಜ್ಯ ವರನಟ ಡಾ.ರಾಜ್‌ ಕುಮಾರ್‌ ಜನ್ಮದಿನ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಗೌರವ ನಮನ

ವರನಟ ಡಾ.ರಾಜ್‌ ಕುಮಾರ್‌ ಜನ್ಮದಿನ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಗೌರವ ನಮನ

0

ಬೆಂಗಳೂರು (Bengaluru)- ವರನಟ, ಪದ್ಮಭೂಷಣ ಡಾ. ರಾಜ್‌ಕುಮಾರ್ (Dr.Rajkumar) ಅವರ ಜನ್ಮದಿನವಿಂದು. ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದ ಮಹಾನ್ ಪ್ರತಿಭೆ ಡಾ. ರಾಜ್‌ಕುಮಾರ್‌ ಅವರನ್ನು ಗಣ್ಯರು, ಚಿತ್ರರಂಗದವರು, ನಾಡಿನಾದ್ಯಂತ ಅಭಿಮಾನಿಗಳು ನೆನೆಯುತ್ತಿದ್ದಾರೆ. ಅಣ್ಣಾವ್ರ ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.

ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ (Basavaraj Bommai), ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah), ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (H.D.Kumarswamy ಸೇರಿದಂತೆ ಅನೇಕರು ರಾಜ್‌ ಅವರನ್ನು ನೆನೆದಿದ್ದಾರೆ.

ಸಿಎಂ ಬೊಮ್ಮಾಯಿ ಅವರು, ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್‌ಕುಮಾರ್ ರವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯಾಗಿ, ತೆರೆಯ ಮೇಲೆ ತಮ್ಮ ಅದ್ಭುತ ನಟನೆಯಿಂದ, ತೆರೆಯ ಹಿಂದೆ ತಮ್ಮ ಹೃದಯವೈಶಾಲ್ಯತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ.ರಾಜ್ ಅವರು ಈ ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿ, ಆದರ್ಶಯಮಯವಾದ ಬದುಕು ಮತ್ತು ಕಲಾಸೇವೆ ಮೂಲಕ ಸಾರ್ವಕಾಲಿಕ‌ ಮಾದರಿಯನ್ನು ಹಾಕಿಕೊಟ್ಟು ನಮ್ಮೆಲ್ಲ‌ ನಡೆ-ನುಡಿಯನ್ನು ಪ್ರಭಾವಿಸುತ್ತಲೇ ಇರುವ ನಾಡಿನ ಹೆಮ್ಮೆಯ ಪುರುಷೋತ್ತಮ ಮತ್ತು ‘ನಮ್ಮ ಕಾಡಿನ’ ಹಿರಿಯ ಡಾ.ರಾಜಕುಮಾರ್ ಎಂಬ ಚೇತನಕ್ಕೆ ಹುಟ್ಟುಹಬ್ಬದ ದಿನದ ಗೌರವ ಪೂರ್ವಕ ನಮನಗಳು ಎಂದು ಅವರನ್ನು ಸ್ಮರಿಸಿದ್ದಾರೆ.

ಹೆಚ್ಡಿಕೆ ಅವರು, ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್‌ ತಾರೆ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್‌ಕುಮಾರ್‌ ಅವರ ಜಯಂತಿಯಂದು ಆ ಮೇರುನಟರಿಗೆ ನನ್ನ ಭಾವಪೂರ್ಣ ನಮನಗಳು. ಸಿನಿಮಾ ಎಂದರೆ ಮನರಂಜನೆಯಷ್ಟೇ ಅಲ್ಲ, ಸಮಾಜದ ಪಾಲಿನ ಚಿಕಿತ್ಸಕ ಮಾರ್ಗ ಎಂದು ನಂಬಿ ನಡೆದ ಭಾರತೀಯ ಚಿತ್ರರಂಗದ ಏಕೈಕ ಕಲಾಸಂತರು ಅವರು. ಈ ಕಾರಣಕ್ಕಾಗಿಯೇ ಅಣ್ಣಾವ್ರು ಅಜರಾಮರ.

ಅವರ ಚಿತ್ರಗಳನ್ನೇ ನೋಡಿಕೊಂಡು ಬೆಳೆದ ನನ್ನ ಮೇಲೆ ಅವರ ಪ್ರಭಾವ ಹೆಚ್ಚು. ‘ಬಂಗಾರದ ಮನುಷ್ಯ’ ಚಿತ್ರವೇ ನಾನಿಂದು ಕೃಷಿಕನಾಗಲು ಪ್ರೇರಣೆ. ಕನ್ನಡಿಗರ ಸಾಕ್ಷಿಪ್ರಜ್ಞೆ, ಆಸ್ಮಿತೆ, ಶಕ್ತಿ, ಸ್ಫೂರ್ತಿಯ ಸೆಲೆಯೂ ಆಗಿರುವ ಡಾ. ರಾಜ್‌ಕುಮಾರ್‌ ಅವರನ್ನು ಸದಾ ಸ್ಮರಿಸುತ್ತಾ ಅವರ ಆದರ್ಶ ಹೆಜ್ಜೆಗಳಲ್ಲಿ ಶ್ರದ್ಧೆಯಿಂದ ನಡೆಯೋಣ. ನಾಡು, ನುಡಿ, ನೆಲ, ಜಲ ವಿಚಾರಗಳಲ್ಲಿ ಅಣ್ಣಾವ್ರು ಹೊಂದಿದ್ದ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸೋಣ ಎಂದಿದ್ದಾರೆ.

ಸಚಿವ ಡಾ. ಸಿ.ಎನ್. ಅಶ್ವತ್ಥ್‌ ನಾರಾಯಣ್ ಅವರು, ವರನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು. ಗೋಕಾಕ್ ಚಳವಳಿಯ ಮೂಲಕ ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು ಶ್ರಮಿಸುವ ಜತೆ ಅನೇಕ ಸುಪ್ರಸಿದ್ಧ ಪೌರಾಣಿಕ, ಸಾಮಾಜಿಕ, ಕೌಟುಂಬಿಕ ಚಲನಚಿತ್ರ ನೀಡಿದ ಕನ್ನಡದ ಕಣ್ಮಣಿ ಅಣ್ಣಾವ್ರ ಸರಳ ಸಜ್ಜನಿಕೆಯ ವ್ಯಕ್ತಿತ್ವ ನಮ್ಮೆಲ್ಲರಿಗೂ ಆದರ್ಶ ಎಂದು ಟ್ವೀಟ್ ಮಾಡಿದ್ದಾರೆ.