ಶಿವಮೊಗ್ಗ (Shivamogga)-ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ವಿಮಾನ ನಿಲ್ದಾಣಕ್ಕೆ (Airport) ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರ ಹೆಸರನ್ನು ಇಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡದಂತೆ ಖುದ್ದು ಬಿ.ಎಸ್.ಯಡಿಯೂರಪ್ಪ ಇದೀಗ ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪತ್ರ ಬರೆದಿದ್ದಾರೆ.
ಜೊತೆಗೆ ರಾಷ್ಟ್ರದ , ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡಿದ ಮಹನೀಯರ ಹೆಸರು ಇಡುವಂತೆ ಮನವಿ ಮಾಡಿದ್ಧಾರೆ.
ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಲು ಸೋಗಾನೆಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ, ನೂತನವಾಗಿ ನಿರ್ಮಾಣವಾಗುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡುವುದಾಗಿ ಘೋಷಣೆ ಮಾಡಿದ್ದರು. ಇದಕ್ಕೆ ಬಿಎಸ್‌ವೈ ಬೆಂಬಲಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇದೀಗ ತಮ್ಮ ಹೆಸರು ಇಡದಂತೆ ಬಿಎಸ್ವೈ ಅವರೇ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಇಡುವುದಾಗಿ ಘೋಷಿಸಿರುವ ಸಿಎಂ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಮೇಲೆ ಇಷ್ಟೊಂದು ಪ್ರೀತಿ ಹಾಗೂ ಅಭಿಮಾನ ತೋರಿದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಆದರೆ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿನ ಬದಲಾಗಿ ಬೇರೆ ಮಹನೀಯರ ಅಥವಾ ಸಾಧಕರ ಹೆಸರನ್ನು ಇಡುವುದು ಸೂಕ್ತ ಎಂದು ನಾನು ಭಾವಿಸಿದ್ದೇನೆ ಎಂದು ಸಿಎಂ ಅವರಿಗೆ ಬರೆದಿರುವ ಪತ್ರದಲ್ಲಿ ಬಿಎಸ್‌ವೈ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರಭಕ್ತರ ಕೊಡುಗೆಗೆ ಹೋಲಿಸಿದರೆ ನನ್ನದು ಅಳಿಲು ಸೇವೆ ಮಾತ್ರ. ಹೀಗಾಗಿ ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಇಡುವುದು ಸೂಕ್ತವಲ್ಲ ಎಂಬುದು ನನ್ನ ಅನಿಸಿಕೆ. ಹೀಗಾಗಿ ನನ್ನ ಮನವಿಯನ್ನು ಮನ್ನಿಸಿ ನೂತನ ವಿಮಾನ ನಿಲ್ದಣಕ್ಕೆ ಬೇರೆ ಮಹನೀಯರ ಹೆಸರನ್ನು ಶಿಫಾರಸ್ಸು ಮಾಡುವಂತೆ ಬಿಎಸ್‌ಸೈ ಅವರು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.