ಮಂಗಳೂರು(ದಕ್ಷಿಣ ಕನ್ನಡ): ಕಾಡಿನಲ್ಲಿ ಸಿಗುವ ಹಣ್ಣನ್ನು ಸೇವಿಸಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು ಶರಬತ್ತು ಮಾಡಿ ಕುಡಿದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಅಮರಪಡ್ನೂರು ಗ್ರಾಮದ ಕುಳ್ಳಾಜೆ ನಿವಾಸಿ ಲೀಲಾವತಿ(35) ಮೃತಪಟ್ಟವರು. ಲೋಕಯ್ಯ ನಾಯ್ಕ ಕೂಡಾ ಹಣ್ಣಿನ ಶರಬತ್ತು ಕುಡಿದು ಅಸ್ವಸ್ಥಗೊಂಡಿದ್ದರೆನ್ನಲಾಗಿದೆ.
ಲೀಲಾವತಿ ಹಾಗೂ ಲೋಕಯ್ಯ ನಾಯ್ಕ ಒಂದು ವಾರದ ಹಿಂದೆ ಮೈರೋಳ್ ಹಣ್ಣಿನ ರಸ ತೆಗೆದು ಶರಬತ್ತು ಮಾಡಿ ಕುಡಿದಿದ್ದರು ಎನ್ನಲಾಗಿದೆ. ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥಗೊಂಡಿದ್ದರು.
ಈ ಪೈಕಿ ವಾಂತಿ, ಭೇದಿ ಕಾಣಿಸಿಕೊಂಡಿದ್ದ ಲೀಲಾವತಿಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ವಸ್ಥತೆ ತೀವ್ರಗೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.