ಮನೆ ಕಾನೂನು ನಿವೇಶನ ನೋಂದಣಿ ಮಾಡಿಸಿಕೊಡಲು ಸತಾಯಿಸಿದ ಸೊಸೈಟಿಗೆ 55 ಸಾವಿರ ದಂಡ

ನಿವೇಶನ ನೋಂದಣಿ ಮಾಡಿಸಿಕೊಡಲು ಸತಾಯಿಸಿದ ಸೊಸೈಟಿಗೆ 55 ಸಾವಿರ ದಂಡ

0

ಬೆಂಗಳೂರು: ಮುಂಗಡ ಹಣ ಪಾವತಿಯಾದ ಬಳಿಕವೂ ನಿಗದಿತ ಸಮಯದಲ್ಲಿ ನಿವೇಶನ ನೋಂದಣಿ ಮಾಡಿಕೊಡುವುದರಲ್ಲಿ ಹಿಂದೇಟು ಹಾಕಿದ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಉದ್ಯೋಗಿಗಳ ಗೃಹ ನಿರ್ಮಾಣ ಕೋ-ಆಪರೇಟಿವ್‌ ಸೊಸೈಟಿ ಕಾರ್ಯದರ್ಶಿಗೆ ಗ್ರಾಹಕ ನ್ಯಾಯಾಲಯ 55 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಯಲಂಹಕದ ನಿವಾಸಿಯೊಬ್ಬರು ಸೊಸೈಟಿಗೆ 2014ರಿಂದ 2019ರವರೆಗೆ ಹಂತವಾಗಿ 10.60 ಲಕ್ಷ ರೂ. ಪಾವತಿಸಿ ನೆಲಮಂಗಲ ತಾಲೂಕಿನಲ್ಲಿ 30×40 ಸೈಟ್‌ ಖರೀದಿಸಲು ಮುಂಗಡ ಹಣ ಪಾವತಿಸಿದ್ದರು. ಅನಂತರದ ದಿನದಲ್ಲಿ ನಿವೇಶನ ನೋಂದಣಿ ಮಾಡುವಂತೆ ಅನೇಕ ಬಾರಿ ದೂರುದಾರರು ಮನವಿ ಮಾಡಿಕೊಂಡಿದ್ದರೂ, ವಿವಿಧ ಕಾರಣ ನೀಡಿ ನೋಂದಣಿಯನ್ನು 9 ವರ್ಷ ಮುಂದೆ ಹಾಕುತ್ತಾ ಬಂದಿದ್ದಾರೆ.

ದೂರುದಾರರು 2022ರಲ್ಲಿ ಸೊಸೈಟಿಗೆ ಮುಂಗಡ ಹಣ ಮರುಪಾವತಿಸುವಂತೆ ಇಲ್ಲವೇ ನಿವೇಶನ ನೋಂದಣಿ ಮಾಡಿಕೊಂಡುವಂತೆ ಲೀಗಲ್‌ ನೋಟಿಸ್‌ ಕಳುಹಿಸಿದ್ದರೂ ಯಾವುದೇ ರೀತಿಯಾದ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಬೇಸತ್ತ ದೂರುದಾರರು ಬೆಂಗಳೂರು 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ದಾಖಲೆ ಪರಿಶೀಲನೆ ನಡೆಸಿದ ಬೆಂಗಳೂರು 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಬಿ. ನಾರಾಯಣಪ್ಪ ಅವರ ನೇತೃತ್ವದ ಪೀಠವು ಸೊಸೈಟಿಯು ನೀಡಿದ ಭರವಸೆಯನ್ನು ದೂರುದಾರನಿಗೆ 30×40 ಸೈಟ್‌ನ್ನು ಒಂದು ತಿಂಗಳೊಳಗೆ ನೋಂದಣಿ ಮಾಡಿಕೊಡಬೇಕು. ಇಲ್ಲವಾದರೆ ಪರ್ಯಾಯವಾಗಿ ಈ ಹಿಂದೆ ಪಾವತಿ ಮಾಡಿರುವ 10.60 ಲಕ್ಷ ರೂ. ಮೊತ್ತಕ್ಕೆ ಶೇ.12 ಬಡ್ಡಿ ಸೇರಿಸಿದ ಮೊತ್ತ ಮುಂದಿನ 3 ತಿಂಗಳೊಳಗೆ ಹಾಗೂ 50 ಸಾವಿರ ರೂ. ಪರಿಹಾರ, 5 ಸಾವಿರ ರೂ. ವಾಜ್ಯ ಬಾಬ್ತು ಸೇರಿ 55 ಸಾವಿರ ರೂ. ಪಾವತಿಸುವಂತೆ ಗ್ರಾಹಕ ನ್ಯಾಯಾಲಯವು ತೀರ್ಪು ನೀಡಿದೆ.