ಮನೆ ಕ್ರೀಡೆ ರಾಜಸ್ಥಾನ ವಿರುದ್ಧ ಸೋತ ಆರ್‌ ಸಿಬಿ

ರಾಜಸ್ಥಾನ ವಿರುದ್ಧ ಸೋತ ಆರ್‌ ಸಿಬಿ

0

ಪುಣೆ (Pune)-ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಬ್ಯಾಕ್‌ ಟು ಬ್ಯಾಕ್‌ ಸೋಲಿನ ಆಘಾತಕ್ಕೊಳಗಾಗಿದೆ. ರಾಜಸ್ಥಾನ್‌ ರಾಯಲ್ಸ್‌ (RR) ತಂಡದ ವಿರುದ್ಧ ಆರ್‌ ಸಿಬಿ ಮುಗ್ಗರಿಸಿದೆ.

ಇಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ಗೆಲ್ಲಲು ಕೇವಲ 145 ರನ್‌ಗಳ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡ ಆರಂಭಿಕ ಆಘಾತಕ್ಕೊಳಗಾಗಿ ಸತತವಾಗಿ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿ 19.3 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಆ ಮೂಲಕ ಐಪಿಎಲ್‌ ನಲ್ಲಿ ಆಡಿದ ಒಟ್ಟು 9 ಪಂದ್ಯಗಳಲ್ಲಿ ನಾಲ್ಕನೇ ಸೋಲಿನೊಂದಿಗೆ ಅಂಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಾರಿದೆ. ಇದು ಐಪಿಎಲ್ ಟೂರ್ನಿಯಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತವಾಗಿದೆ. ಅಂದಹಾಗೆ ಮೊದಲ ಇನಿಂಗ್ಸ್‌ನಲ್ಲೂ ಕಡಿಮೆ ಮೊತ್ತ (68 ರನ್) ಗಳಿಸಿದ ದಾಖಲೆಯೂ ಆರ್‌ಸಿಬಿ ಹೆಸರಲ್ಲಿದೆ.

ಕ್ಯಾಪ್ಟನ್‌ ಫಾಫ್‌ ಡು’ಪ್ಲೆಸಿಸ್‌ (23) ತಂಡದ ಪರ ಗರಿಷ್ಠ ರನ್‌ ಸ್ಕೋರರ್‌ ಆದರು. ವಿರಾಟ್‌ ಕೊಹ್ಲಿ (9) ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ (0) ಆರಂಭದಲ್ಲೇ ವಿಕೆಟ್‌ ಒಪ್ಪಿಸಿದ್ದು, ಹಾಗೂ ಇನಿಂಗ್ಸ್‌ ಮಧ್ಯದಲ್ಲಿ ದಿನೇಶ್ ಕಾರ್ತಿಕ್‌ (6) ರನ್‌ಔಟ್‌ ಆಗಿದ್ದು ಆರ್‌ಸಿಬಿ ತಂಡವನ್ನು ಸೋಲಿನ ದವಡೆಗೆ ದೂಡಿತು. ‌

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ತಂಡ ಆರ್‌ ಸಿಬಿ ಯ ಬೌಲಿಂಗ್‌ ದಾಳಿಯೆದುರು ಹೆಚ್ಚೇನೂ ಅಬ್ಬರಿಸಲಾಗಲಿಲ್ಲ. ಇದರಿಂದ  ರಾಜಸ್ಥಾನ ತಂಡ 145 ರನ್‌ಗಳ ಸಾಧಾರಣ ಮೊತ್ತ ಮಾತ್ರವೇ ದಾಖಲಿಸಿತು. ಆಲ್‌ರೌಂಡರ್‌ ರಿಯಾನ್‌ ಪರಾಗ್‌ (56*) ದಾಖಲಿಸಿದ ಹೋರಾಟದ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 144/8 ರನ್‌ ದಾಖಲಿಸಿತು.

ಚಾಲೆಂಜರ್ಸ್‌ ಪರ ಮಿಂಚಿದ ವೇಗಿ ಜಾಶ್‌ ಹೇಝಲ್‌ವುಡ್‌ (19ಕ್ಕೆ 2) ಮತ್ತು ಮೊಹಮ್ಮದ್‌ ಸಿರಾಜ್‌ (30ಕ್ಕೆ 2) ತಲಾ ಎರಡು ವಿಕೆಟ್‌ ಪಡೆದರೆ, ಲೆಗ್‌ ಸ್ಪಿನ್ನರ್‌ ವಾನಿಂದು ಹಸರಂಗ ಕೂಡ ಎರಡು ವಿಕೆಟ್‌ ಸಂಪಾದಿಸಿದರು. ತಮ್ಮ ಕೊನೇ ಓವರ್‌ನಲ್ಲಿ 18 ರನ್‌ ಕೊಟ್ಟ ಹರ್ಷಲ್‌ ಪಟೇಲ್‌ (33ಕ್ಕೆ 1) ಒಂದು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌

ರಾಜಸ್ಥಾನ್‌ ರಾಯಲ್ಸ್‌:
20 ಓವರ್‌ಗಳಲ್ಲಿ 8 ವಿಕೆಟ್‌ಗೆ 144 ರನ್‌ (ಸಂಜು ಸ್ಯಾಮ್ಸನ್‌ 27, ರಿಯಾನ್‌ ಪರಾಗ್‌ 56*; ಜಾಶ್‌ ಹೇಝಲ್‌ವುಡ್‌ 19ಕ್ಕೆ 2, ಮೊಹಮ್ಮದ್‌ ಸಿರಾಜ್‌ 30ಕ್ಕೆ 2, ಹರ್ಷಲ್‌ ಪಟೇಲ್ 33ಕ್ಕೆ 1).

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು:
19.3 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲ್‌ಔಟ್‌ (ಫಾಫ್ ಡು’ಪ್ಲೆಸಿಸ್‌ 23, ರಜತ್‌ ಪಾಟಿದಾರ್‌ 16, ಶಹಬಾಝ್‌ ಅಹ್ಮದ್‌ 17, ವಾನಿಂದು ಹಸರಂಗ 18; ರವಿಚಂದ್ರನ್‌ ಅಶ್ವಿನ್ 17ಕ್ಕೆ 3, ಕುಲ್ದೀಪ್‌ ಸೇನ್‌ 20ಕ್ಕೆ 4, ಪ್ರಸಿಧ್‌ ಕೃಷ್ಣ 23ಕ್ಕೆ 2).
ಪಂದ್ಯಶ್ರೇಷ್ಠ: ರಿಯಾನ್‌ ಪರಾಗ್‌