ಮನೆ ರಾಜ್ಯ ಒಎಫ್‌ ಸಿ ಕೇಬಲ್‌ ತಾಗಿ ಯುವಕ ಮೃತಪಟ್ಟ ಪ್ರಕರಣ: ಟೆಲಿಕಾಂ ಕಂಪನಿಯ ನಿರ್ಲಕ್ಷ್ಯ ತನಿಖೆಯಲ್ಲಿ ಬಯಲು

ಒಎಫ್‌ ಸಿ ಕೇಬಲ್‌ ತಾಗಿ ಯುವಕ ಮೃತಪಟ್ಟ ಪ್ರಕರಣ: ಟೆಲಿಕಾಂ ಕಂಪನಿಯ ನಿರ್ಲಕ್ಷ್ಯ ತನಿಖೆಯಲ್ಲಿ ಬಯಲು

0

ಬೆಂಗಳೂರು (Bengaluru)- ಫುಟ್‌ಪಾತ್‌ ಮೇಲೆ ನಡೆದುಕೊಂಡು ಹೋಗುವಾಗ ಒಎಫ್‌ ಸಿ ಕೇಬಲ್‌ ತಾಗಿ ಮೃತಪಟ್ಟಿದ್ದ ಕಿಶೋರ್‌ (23) ಸಾವಿಗೆ ಟೆಲಿಕಾಂ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಗೆದ್ದಲಹಳ್ಳಿ ನಿವಾಸಿ ಕಿಶೋರ್‌ ಸೋಮವಾರ ಸಾಯಂಕಾಲ ಸಂಜಯ್‌ ನಗರದ ಎಇಸಿಎಸ್‌ ಬಡಾವಣೆಯ ಫುಟ್‌ಪಾತ್‌ ಮೇಲೆ ನಡೆದುಕೊಂಡು ಬರುತ್ತಿದ್ದ ವೇಳೆ ಮರದಲ್ಲಿ ನೇತಾಡುತ್ತಿದ್ದ ಕೇಬಲ್‌ ಅನ್ನು ಅಚಾನಕ್‌ ಆಗಿ ಸ್ಪರ್ಶಿಸಿದ್ದರು. ಈ ವೇಳೆ ವಿದ್ಯುತ್‌ ಪ್ರವಹಿಸಿದ್ದರಿಂದ ಕಿಶೋರ್‌ ಸ್ಥಳದಲ್ಲೇ ಒದ್ದಾಡಿ ಮೃತಪಟ್ಟಿದ್ದರು.

ಟೆಲಿಕಾಂ ಕಂಪನಿ ಸಮೀಪದ ಮನೆಗೆ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವ ರೂಟರ್‌ ಬಾಕ್ಸ್‌ನ ಓಎಫ್‌ಸಿ ಕೇಬಲ್‌ಗಳನ್ನು ಮರದಲ್ಲಿ ಸುತ್ತಿಟ್ಟಿದೆ. ತಾಂತ್ರಿಕ ಸಮಸ್ಯೆಯಿಂದ ಮನೆ ಸಂಪರ್ಕದ ವಿದ್ಯುತ್‌ ಕೇಬಲ್‌ಗೂ ಪ್ರವಹಿಸಿದೆ. ಇದನ್ನು ಯಾರೂ ನೋಡಿಕೊಂಡಿಲ್ಲ. ಕಿಶೋರ್‌ ನಡೆದುಕೊಂಡು ಬರುವಾಗ ಕೈಯಿಂದ ಆಕಸ್ಮಿಕವಾಗಿ ಸ್ಪರ್ಶಿಸಿದಾಗ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಬೆಸ್ಕಾಂ ನಿರ್ಲಕ್ಷ್ಯ ಸದ್ಯಕ್ಕೆ ಕಂಡು ಬಂದಿಲ್ಲ. ಪ್ರಕರಣದ ಕೂಲಂಕುಷ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.  

ಈ ಬಗ್ಗೆ ಆತನ ಸಹೋದರಿ ಸಿಂಧು ಸಂಜಯ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಬೆಸ್ಕಾಂ ಹಾಗೂ ಏರ್‌ಟೆಲ್‌ ಟೆಲಿಕಾಂ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

ಹಿಂದಿನ ಲೇಖನರಾಜಸ್ಥಾನ ವಿರುದ್ಧ ಸೋತ ಆರ್‌ ಸಿಬಿ
ಮುಂದಿನ ಲೇಖನಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ