ಮನೆ ಯೋಗಾಸನ ಪ್ರಾಣಾಯಾಮ

ಪ್ರಾಣಾಯಾಮ

0

ಹೇಗೆ ಯೋಗವೆನ್ನುವ ಪದ ವಿಸ್ತಾರವಾದ ಅರ್ಥವನ್ನು ಹೊಂದಿದೆಯೋ ಹಾಗೆ ʼಪ್ರಾಣʼ ಎನ್ನುವ ಪದವೂ ಕೂಡ. ಪ್ರಾಣ ಎಂದರೇನು ಇದು ದೇಹಕ್ಕೆ ವಿರುದ್ಧವಾದ ಆತ್ಮವೆಂಬಂತೆ ಆತ್ಮವನ್ನು ಸೂಚಿಸುತ್ತದೆ. ಆ ಪದವನ್ನು ಸಾಮಾನ್ಯವಾಗಿ ಬಹುವಚನದಲ್ಲೇ ಎಂದರೆ ಪಂಚಪ್ರಾಣಗಳು ಎಂದು ಉಪಯೋಗಿಸುತ್ತಾರೆ. ಆಯಾಮ ಎಂದರೆ ಉದ್ದ, ವಿಸ್ತಾರ, ಇಲ್ಲವೇ ಸಂಕೋಚ ಎಂದರ್ಥ. ಪ್ರಾಣಾಯಾಮ ಎಂದರೆ ಉಸಿರಿನ ವಿಸ್ತಾರ ಮತ್ತು ಸಂಕೋಚ ಅಥವಾ ನಿಗ್ರಹ. ಈ ನಿಗ್ರಹವು ಉಸಿರಿನ ಎಲ್ಲಾ ಚಟುವಟಿಕೆಗಳಿಗೂ ಅನ್ವಯಿಸುತ್ತದೆ. ೧. ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವುದು – ಇದಕ್ಕೆ ಪೂರಕ ಎಂದು ಹೆಸರು. ೨. ಉಸಿರನ್ನು ಹೊರಕ್ಕೆ ಬಿಡುವುದನ್ನು – ಇದಕ್ಕೆ ರೇಚಕ ಎಂದು ಹೆಸರು. ೩. ಉಸಿರನ್ನು ಒಳಗೆ ನಿಲ್ಲಿಸುವುದು – ಇದಕ್ಕೆ ಕುಂಭಕ ಎಂದು ಹೆಸರು. ಹಠಯೋಗದ ಗ್ರಂಥಗಳಲ್ಲಿ ಕುಂಭಕವೆನ್ನುವ ಪದಗಳನ್ನು ಸಡಿಲವಾದ ಅರ್ಥಗಳಲ್ಲಿ ಈ ಎಲ್ಲ ಚಟುವಟಿಕೆಗಳಿಗೂ ಅನ್ವಯಿಸುತ್ತದೆ.

ಕುಂಭ ಎಂದರೆ ಮಡಕೆ. ನೀರನ್ನು ಹಿಡಿದಿರುವ ಪಾತ್ರೆಯಲ್ಲಿ ವಾಯುವನ್ನು ಹೊರಗೆ ಹೊರಡಿಸಿ ನೀರಿನಿಂದ ತುಂಬಬಹುದು. ಇಲ್ಲವೇ ನೀರನ್ನು ತೆಗೆದು ವಾಯುವಿನಿಂದ ತುಂಬಬಹುದು. ಈ ರೀತಿ ಕುಂಭಕದಲ್ಲಿ ಎರಡು ವಿಧಗಳಿವೆ. – ೧. ಪೂರ್ಣವಾಗಿ ಶ್ವಾಸಕೋಶಗಳಲ್ಲಿ ಪ್ರಾಣವಾಯುವನ್ನು ತುಂಬಿಸಿ ಉಸಿರಾಟ ನಿಲ್ಲಿಸುವುದು. ೨. ಶ್ವಾಸಕೋಶಗಳಿಂದ ಪೂರ್ಣವಾಗಿ ಉಸಿರನ್ನು ಹೊರಕ್ಕೆ ಬಿಟ್ಟು ಮತ್ತೆ ಉಸಿರಾಟ ನಿಲ್ಲಿಸುವುದು. ಮೊದಲ ಹಂತಗಳಲ್ಲಿ ಎಂದರೆ ಪೂರ್ಣವಾಗಿ ಉಸಿರನ್ನು ನಡೆದುಕೊಂಡು ಅದನ್ನು ಖಾಲಿ ಮಾಡುವ ಸ್ಥಿತಿಗೆ ಅಂತರ ಕುಂಭಕ ವೆಂದು ಹೆಸರು. ಎರಡನೇ ಹಂತದಲ್ಲಿ ಉಸಿರನ್ನು ಪೂರ್ಣವಾಗಿ ಖಾಲಿ ಮಾಡಿ ಎಳೆದುಕೊಳ್ಳುವ ಸ್ಥಿತಿಗೆ ಬಾಹ್ಯಕುಂಭಕ ವೆಂದು ಹೆಸರು. ಅಂತರ ಎಂದರೆ ಒಳಗಿನ, ಬಾಹ್ಯ ಎಂದರೆ ಒಳಗಿನ ಎಂದರ್ಥ. ಈ ಎರಡು ಸ್ಥಿತಿಗಳನ್ನು ಕಾಣುವ ವಿರಾಮ ಸ್ಥಿತಿಗೆ ಕುಂಭಕವೆಂದು ಹೆಸರು. ಎಂದರೆ ಈ ಸ್ಥಿತಿಯಲ್ಲಿ ಉಸಿರಾಟವಾಗಿ ಉಸಿರಾಟವಿರುವುದಿಲ್ಲ.

ಪ್ರಾಣಾಯಾಮವು ಉಸಿರಾಟದ ಒಂದು ವಿಜ್ಞಾನ. ಅದು ಜೀವನವೆಂಬ ಚಕ್ರದ ನಾಭಿಯಂತೆ. ಹಠಯೋಗದ ಪ್ರದೀಪಿಕೆಯು ಈ ವಿಚಾರದಲ್ಲಿ ಒಂದು ಎಚ್ಚರ ನೀಡುತ್ತದೆ :

ಯಥಾ ಸಿಂಹೋ ಗಜೋ ವ್ಯಾಘ್ರೋ ಭವೇದ್ವಶ್ಯಾಃ ಶನೈಃ ಶನೈಃ |

ತಥೈವ ಸೇವಿತೋ ವಾಯುಃ ಅನ್ಯಥಾ ಹಂತಿ ಸಾಧಕಮ್ ||

                                                        –ದ್ವೀತಿಯೋಪದೇಶ ೧೬

ಅಂದರೆ – “ಹೇಗೆ ಸಿಂಹಗಳನ್ನೂ, ಆನೆಗಳನ್ನೂ, ಹುಲಿಗಳನ್ನೂ, ಮೆಲ್ಲ ಮೆಲ್ಲಗೆ ಪಳಗಿಸಲು ಸಾಧ್ಯವೋ ಅದರಂತೆಯೇ ಪ್ರಾಣವನ್ನು ನಿಧಾನವಾಗಿ, ಹಂತಹಂತವಾಗಿ, ಅವರವರ ದೈಹಿಕ ಶಕ್ತಿ ಸಾಮರ್ಥ್ಯಗಳಿಗನುಸಾರವಾಗಿ ಹತೋಟಿಗೆ ತರಬೇಕು. ಇಲ್ಲದಿದ್ದರೆ ಸಾಧಕನನ್ನು ಅದು ಕೊಲ್ಲುತ್ತದೆ”.  

ಯೋಗಿಯ ಜೀವಿತಕಾಲವನ್ನು ದಿನಗಳಿಂದ ಗಣಿಸುವುದಲ್ಲ, ಆತನ ಉಸಿರಾಟ ದೃಷ್ಟಿಯಿಂದ ಗಣಿಸಬೇಕು. ಆದ್ದರಿಂದ ಆತನು ತಾಳಬದ್ಧವಾದ, ಮಂದವಾದ, ಧೀರ್ಘವಾದ, ಉಸಿರಾಟವನ್ನು ನಡೆಸುತ್ತಾನೆ. ಈ ತಾಳಬದ್ಧ ಕ್ರಮವು ಶ್ವಾಸ ಪದ್ದತಿಯನ್ನು ಬಲಪಡಿಸುತ್ತದೆ. ನರಗಳನ್ನು ಶಮನಗೊಳಿಸುತ್ತದೆ ಮತ್ತು ಆಶಯಗಳನ್ನು ಮಿತಗೊಳಿಸುತ್ತದೆ. ಆಶೆ ಆಕಾಂಕ್ಷೆಗಳು ಕಡಿಮೆಯಾದರೆ ಮನಸ್ಸು ಏಕಾಗ್ರತೆಯನ್ನು ಹೊಂದಲು ಶಕ್ತವಾಗುತ್ತದೆ. ಪ್ರಾಣಾಯಾಮವನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡದಿದ್ದರೆ ಶಿಷ್ಯನು ಬಿಕ್ಕಳಿಕೆ, ವಾತ, ಕೃಚ್ಛೋಚ್ಚ್ವಾಸ, ಕೆಮ್ಮು, ಕಫ, ತಲೆನೋವು, ಕಣ್ಣ ನೋವು, ಕಿವಿ ನೋವು, ನರಗಳ ದೌರ್ಬಲ್ಯ ಮುಂತಾದ ರೋಗಗಳಿಗೆ ಬಲಿಯಾಗುತ್ತಾನೆ. ಮಂದವಾದ ದೀರ್ಘವಾದ ಸಹಜವಾದ ಉಚ್ಛಾವಾಸ ನಿಶ್ವಾಸಗಳನ್ನು ಕಲಿಯಲು ದೀರ್ಘಕಾಲಬೇಕಾಗುತ್ತದೆ. ಕುಂಭಕವನ್ನು ಅಭ್ಯಾಸ ಮಾಡುವ ಮೊದಲು ಇದನ್ನು ಕಲಿಯಬೇಕು.

ಕೆಂಡದ ಮೇಲಿನ ಬೂದಿಯು ಗಾಳಿಯಿಂದ ಹಾರಿ ಹೋದಾಗ ಅದು ಹೇಗೆ ಪ್ರಜ್ವಲಿಸುವುದೋ ಹಾಗೆ ಪ್ರಾಣಾಯಾಮದ ಅಭ್ಯಾಸದಿಂದ ಕಾಮವೆಂಬ ಬೂದಿ ಹಾರಿ ದೇಹದಲ್ಲಿಯ ವೀರ್ಯಪ್ರಜ್ವಲಿಸುತ್ತದೆ.

“ ಮನಸ್ಸಿನಲ್ಲಿರುವ ಭ್ರಮೆಯನ್ನು ತೆಗೆದುಹಾಕುವುದೇ ನಿಜವಾದ ರೇಚಕ. ನಾನು ಆತ್ಮ ಎನ್ನುವ ಅನುಭವವೇ ನಿಜವಾದ ಪೂರಕ. ಈ ಅಭಿಪ್ರಾಯದ ಮೇಲೆ ಮನಸ್ಸು ಚಂಚಲವಾಗದೆ ನಿಂತರೆ ಅದೇ ಕುಂಭಕ. ಇದೇ ನಿಜವಾದ ಪ್ರಾಣಾಯಾಮ ಎಂದು ಶಂಕರಾಚಾರ್ಯರು ಹೇಳಿದ್ದಾರೆ.

ಪ್ರತಿಯೊಂದು ಜೀವಿಯು “ಸೋಹಂ” ಅಂದರೆ ಅವನೇ ನಾನು ಎನ್ನುವ ಪ್ರಾರ್ಥನೆಯನ್ನು ಉಸಿರಿನಿಂದ ಆಡುತ್ತದೆ. ಹಾಗೆ ಉಸಿರು ಬಿಡುವಾಗಲೆಲ್ಲಾ ಅದು ʼಅವನೇ ನಾನುʼ ಎಂದು ಹೇಳುತ್ತದೆ. ಈ ಅಜಾಪ – ಮಂತ್ರ ಪ್ರತಿಯೊಂದು ಜೀವಿಯು ಜೀವಮಾನದ ಪರ್ಯಂತ ನಡೆಯುತ್ತಿರುತ್ತದೆ. ಆದ್ದರಿಂದಲೇ ಆತ್ಮಕ್ಕೆ ಬರುವ ಬಂಧನಗಳಿಂದ ಮುಕ್ತನಾಗುತ್ತಾನೆ. ತನ್ನ ಪ್ರಾಣಾಯಾಮವನ್ನೇ ದೇವರಿಗೆ ಆಹುತಿಯಾಗಿ ಅರ್ಪಿಸುತ್ತಾನೆ. ಪ್ರಾಣವನ್ನೇ ದೇವರ ಅನುಗ್ರಹ ಅಥವಾ ಪ್ರಸಾದಂತೆ ಸ್ವೀಕರಿಸುತ್ತಾನೆ.

 ಪ್ರಾಣವೆನ್ನುವುದು ಪರಮಾತ್ಮನ ಒಂದು ಅಂಶವಾದ ಜೀವಾತ್ಮ ಪ್ರಾಣಯಾಮದ ಮೂಲಕ ಪಿಂಡಪ್ರಾಣಕ್ಕೂ ಬ್ರಹ್ಮಾಂಡಪ್ರಾಣಕ್ಕೂ ಸಾಮರಸ್ಯವನ್ನುಂಟು ಮಾಡಲು ಸಾಧ್ಯವಾಗುತ್ತದೆ.

17 ಶತಮಾನದಲ್ಲಿದ್ದ ಯೋಗಿ ʼಕರೀಬ ಎಕ್ಕನ್ʼ ಎಂಬಾತನು ಈ ರೀತಿ ಹೇಳುತ್ತಾನೆ. “ಶಾಂತ ಸ್ವರೂಪಿ ಆತ್ಮನನ್ನು ಬಳಸಬೇಕಾದರೆ ಉಸಿರಾಟವನ್ನು ಸಕ್ರಮಗೊಳಿಸು. ಏಕೆಂದರೆ ಉಸಿರಾಟ ಕ್ರಮದಲ್ಲಿ ಇದ್ದರೆ ಹೃದಯವು ಶಾಂತವಾಗಿರುತ್ತದೆ. ಉಸಿರಾಟವು ಕ್ರಮದಲ್ಲಿ ಇಲ್ಲದಿದ್ದರೆ ಹೃದಯಕ್ಕೆ ಅನೇಕ ತೊಂದರೆಗಳು ಇರುತ್ತದೆ. ಆದ್ದರಿಂದ ಎಲ್ಲದಕ್ಕಿಂತ ಮೊದಲು ಉಸಿರಾಟವನ್ನು ಸಕ್ರಮಗೊಳಿಸಲು, ಅದರಿಂದ ನಿನ್ನ ಬುದ್ಧಿ ಮೃದುವಾಗುತ್ತದೆ ಆತ್ಮ ಶಾಂತವಾಗುತ್ತದೆ.”

ಚಿತ್ತಾ (ಮನಸ್ಸು, ಅಹಂಕಾರ ಮತ್ತು ಬುದ್ಧಿ) ಎಂಬುದು ಬಹಳ ಶಕ್ತಿಯುತವಾದ ಕುದುರೆಗಳಿಗೆ ಕಟ್ಟಿರುವ ರಥದಂತೆ. ಪ್ರಾಣ ಮತ್ತು ವಾಸನ (ಬಯಕೆ) ಎಂಬ ಎರಡು ಕುದುರೆಗಳು ಬಲಿಯುತವಾದ ಕುದುರೆ ಎಳೆದಕಡೆ ರಥ ಚಲಿಸುತ್ತದೆ. ಪ್ರಾಣವನ್ನು ಜೈಸಿದಾಗ ವಾಸನೆಗಳು ನಿಯಂತ್ರಣಕ್ಕೆ ಬರುತ್ತದೆ, ಇಂದ್ರಿಯಗಳು ಹತೋಟಿಯಲ್ಲಿ ಇರುತ್ತದೆ ಮತ್ತು ಮನಸ್ಸು ಸ್ಥಿರ ಶಾಂತವಾಗುತ್ತದೆ. ಕಾಮ ಎಂಬ ಅಶ್ವ ಬಲವಂತವಾದರೆ ಬಯಕೆಗಳು ಪ್ರಬಲಗೊಂಡು ಪ್ರಾಣವು ಅಸ್ತವ್ಯಸ್ತವಾಗಿ ಮನಸ್ಸು ಉದ್ವೇಗಗೊಂಡು ತೊಂದರೆ ಇಡಾಗುತ್ತದೆ. ಆದ್ದರಿಂದ ಯೋಗಿ ಆದವನು ಪ್ರಾಣ ಎಂಬ ವಿಜ್ಞಾನವನ್ನು ಅರಿತುಕೊಂಡು ಪ್ರಾಣವನ್ನು ಅಧೀನದಲ್ಲಿಟ್ಟುಕೊಂಡು ಮನಸ್ಸನ್ನು ನಿಗ್ರಹಿಸುತ್ತಾನೆ. ಪ್ರಾಣಾಯಾಮದ ಅಭ್ಯಾಸದಲ್ಲಿ ಮನಸು ಚಂಚಲವಾಗದಂತೆ ಕಣ್ಣುಗಳನ್ನು ಮುಚ್ಚಿಕೊಳ್ಳಲಾಗುತ್ತದೆ. ಪ್ರಾಣ ಮತ್ತು ಮನಸ್ಸುಗಳು ಲೀನವಾದಾಗ ಅನಿರ್ವಚನೀಯವಾದ ಆನಂದ ಜನಿಸುತ್ತದೆ.

ಸೋsಯಮೇವಾಸ್ತು ಮೋಕ್ಷಾಖ್ಯಾಃ ಮಾಸ್ತು ವಾಪಿ ಮತಾಂತರೇ |

ಮನಃ ಪ್ರಾಣಲಯೇ ಕಶ್ಚಿನ್ ಆನಂದಃ ಸಂಪ್ರವರ್ತತೇ ||

                                                         __ಹಠಯೀಗದೀಪಿಕಾ ೪-೩೦

ಭಾವವೆಂಬ ಉದ್ರೇಕದಿಂದ ಉಸಿರಾಟದ ತೀವ್ರತೆಯೂ ಹೆಚ್ಚುತ್ತದೆ. ಹಾಗೆ ಉಸಿರಾಟದ ನಿಯಂತ್ರವು ಭಾವನೆಯನ್ನು ಉದ್ರೇಕಕ್ಕೆ ಈಡು ಮಾಡದೆ ತಡೆಯುತ್ತದೆ. ಯೋಗಭ್ಯಾಸದ ಗುರಿ ಮನಸ್ಸನ್ನು ನಿಗ್ರಹಿಸುವುದೆಂದಾದ ಮೇಲೆ ಯೋಗಿಯು ಉಸಿರಾಟವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಾಣಾಯಾಮವನ್ನು ಅಭ್ಯಾಸ ಮಾಡುತ್ತಾನೆ. ಇದು ಇಂದ್ರಿಯಗಳನ್ನು ನಿಗ್ರಹಿಸಲು ಸಹಾಯಕವಾಗಿ ಪ್ರತ್ಯಾಹಾರದ ಸ್ಥಿತಿಗೆ ಅವನನ್ನು ಕೊಂಡೊಯ್ಯುತ್ತದೆ. ಹಾಗಿದ್ದರೆ ಮಾತ್ರ ಮನಸ್ಸು ಏಕಾಗ್ರತೆಗೆ ಅಥವಾ ಧ್ಯಾನಕ್ಕೆ ಸಿದ್ಧವಾಗುತ್ತದೆ.

ಮನಸ್ಸೆನ್ನುವುದು ಎರಡು ಬಗೆ — ಶುದ್ಧ ಮತ್ತು ಅಶುದ್ಧ ಕಾಮಸೂಂಗದ ಮನಸ್ಸು ಅಶುದ್ಧ, ಕಾಮ ವರ್ಜಿತವಾದದ್ದು ಶುದ್ಧ, ಮನಸ್ಸನ್ನು ನಿದ್ದೆ ಮತ್ತು ಚಂಚಲ ತಪ್ಪಿಸಿ ಸ್ಥಿರ ಭಾವದಲ್ಲಿ ನಿಲ್ಲಿಸಿದರೆ ಒಬ್ಬನು ಅಮನಸ್ಕ ಸ್ಥಿತಿಗೆ ಬರುತ್ತಾನೆ. ಇದೇ ಅತ್ಯುತ್ತಮವಾದ ಸಮಾಧಿ. ಅಮನಸ್ಕತೆ ಎಂದರೆ ಹುಚ್ಚು ಸ್ಥಿತಿ, ಮೋಡ ಸ್ಥಿತಿ ಇದು ಆಲೋಚನೆ ಕಾಮಗಳಿಂದ ಮುಕ್ತವಾದ ಜಾಗೃತ ಸ್ಥಿತಿ ಈ ಸ್ಥಿತಿಯನ್ನು ಸಾಧಿಸಲು ಯತ್ನಿಸುವ ಯೋಗಿಗೂ ಹುಚ್ಚನಿಗೂ ಅಥವಾ ಮೂಡನಿಗೂ ವ್ಯತ್ಯಾಸವಿದೆ. ಮೂಢನು ಅಥವಾ ಹುಚ್ಚನು ಆ ಜಾಗೃತನಾದರೆ ಯೋಗಿಯು ಯಾವ ವಿಚಾರಕ್ಕೂ ಅಂಟಿಕೊಂಡಿರುವುದಿಲ್ಲ. ಯೋಗ ಎಂದರೆ ಪ್ರಾಣ ಮತ್ತು ಮನಸ್ಸಿನ ಏಕತೆ ಹಾಗೆ ಇರುವಿಕೆ ಸಂಬಂಧಪಟ್ಟ ಆತಂಕಗಳ ವಿಸರ್ಜನೆಯ ಯೋಗ.

ಪ್ರಾಣವಾಯು – ಬಹು ಸೂಕ್ಷ್ಮತ್ತರವಾದ ಶಕ್ತಿಯೆಂದರೆ ವಾಯು. ಈ ವಾಯುವನ್ನು ಅದು ಮಾಡಬಹುದಾದ ಕಾರ್ಯಗಳ ಆಧಾರದ ಮೇಲೆ ಐದು ವಿಧಗಳಾಗಿ ಹಠಯೋಗ ಗ್ರಂಥಗಳಲ್ಲಿ ವಿಂಗಡಿಸುತ್ತಾರೆ. ಅವು ಯಾವುವು ಎಂದರೆ, ಪ್ರಾಣ – ಇದು ಹೃದಯದ ಸ್ಥಾನದಲ್ಲಿ ಸಂಚರಿಸಿ ಉಸಿರಾಟವನ್ನು ಹತೋಟಿಯಲ್ಲಿಟ್ಟಿರುತ್ತದೆ. ಅಪಾನ- ಇದು ಹೊಕ್ಕಳಿನಿಂದ ಕೆಳಗೆ ಇದ್ದು ಮಲಮೂತ್ರಗಳ ವಿಸರ್ಜಿಗೆ ಅನುಕೂಲವಾಗಿರುತ್ತದೆ. ಸಮಾನ – ಇದು ಜೀರ್ಣಕ್ಕೆ ಸಹಾಯವಾಗುವ ಉದರಾಗ್ನಿಗಳಿಗೆ ಸಂಬಂಧಪಟ್ಟಿರುತ್ತದೆ. ಉದಾನ – ಇದು ಮೂಗಿನ ನೇರಕ್ಕಿಳಿದು ಗಾಳಿ ಮತ್ತು ಆಹಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ವ್ಯಾನ – ಇದು ದೇಹವೆಲ್ಲ ವ್ಯಾಪ್ತಿಯಾಗಿದ್ದು ಆಹಾರ ಮತ್ತು ವಾಯುವಿನಿಂದ ಬರುವ ಶಕ್ತಿಯನ್ನು ದೇಹದಲೆಲ್ಲ ಚಾಲನೆ ಮಾಡುವಂಥದ್ದು. ಇದಲ್ಲದೆ ಐದು ಉಪವಾಯುಗಳು ಇವೆ.  ಅವು ಯಾವುದೆಂದರೆ ನಾಗ (ಐದು ತೇಗುವುದರ ಮೂಲಕ ಹೊಟ್ಟೆಯೊಳಗಿನ ಭಾರ ಕಡಿಮೆ ಮಾಡುತ್ತದೆ) ಕೂರ್ಮ (ಇದು ಕಣ್ಣು ರೆಪ್ಪೆಗಳನ್ನು ಮುಚ್ಚುವುದಕ್ಕೆ ಸಹಾಯ ಮಾಡಿ ಇತರ ಪದಾರ್ಥಗಳ ಕಣ್ಣಿನೊಳಗೆ ಬೀಳದಂತೆಯೂ ಹೆಚ್ಚಿನ ಬೆಳಕು ಕಣ್ಣಿಗೆ ಹೊಡೆಯದಂತೆ ನಿಯಂತ್ರಿಸಲು ಸಹಾಯ ಮಾಡುತ್ತದೆ.) ; ಕೃಕರ (ಇದು ಸೀನು ಮತ್ತು ಕೆಮ್ಮು ದರ ಮೂಲಕ ಗಾಳಿ ದ್ವಾರಗಳಿಂದಲೂ ಆಹಾರದ್ವಾರಗಳಿಂದಲೂ ಬೇರೆ ಪದಾರ್ಥಗಳು ಹೋಗದಂತೆ ಮಾಡುತ್ತದೆ.) : ದೇವದತ್ತ (ಇದು ಆಯಾಸವಾದಾಗ ಹೆಚ್ಚಿನ ಆಮ್ಲಜನಕ ದೇಹದೊಳಗೆ ಹೋಗಲು ಸಹಾಯ ಮಾಡುತ್ತದೆ), ಮತ್ತು ಧನಂಜಯ (ಇದು ವ್ಯಕ್ತಿಯು ಸತ್ತ ನಂತರವೂ ದೇಹದಲ್ಲಿದ್ದು ಅವನ ದೇಹ ಉಬ್ಬುವಂತೆ ಮಾಡುತ್ತದೆ).

ಇದಕ್ಕೆ ಆಧಾರವಾಗಿ ಅಮರಕಾರನ ಶ್ಲೋಕಗಳನ್ನು ನೋಡಬಹುದು.

ಪ್ರಾಣೋsಪಾನಸ್ಸಮಾನಶ್ವೋದಾನವ್ಯಾನೌ ಚ ವಾಯವಃ |

ಹೃದಿ ಪ್ರಾಣೋ ಗುದೇsಪಾನಃ ಸಮಾನೋ ನಾಭಿಸಂಸ್ಥಿತಃ ||

ಉದಾನಃ ಕಂಠದೇಶಸ್ಥೋ ವ್ಯಾನಃ ಸರ್ವಶರೀರಗಃ |

ನಾಗಶ್ಚಾ ಕೂರ್ಮಃ ಕೃಕರೋ ದೇವದತ್ತೋ ಧನಂಜಯಃ ||

ವಾಗ್ದ್ವಾರೇ ನಾಗ ಅಖ್ಯಾತಃ ಕೂರ್ಮ ಉನ್ಮೀಲನೇ ಸ್ಮೃತಃ |

ಕೃಕರಾಚ್ಚ ಕ್ಷುತಂ ಜ್ಞೇಯಂ ದೇವದತ್ತಾತ್ ವಿಜೃಂಭಣಮ್ ||

ನ ಜಹಾತಿ ಮೃತಂ ವಾಪಿ ಸರ್ವವ್ಯಾಪೀ ಧನಂಜಯಃ ||

                       -ನಾಮಲಿಂಗಾನುಶಾಸನ-ಸ್ವರ್ಗವರ್ಗ-೬೩ ರಿಂದ ೬೬.