ಮನೆ ಸಾಹಿತ್ಯ ಜೀವಲೋಕದ ಅದ್ಭುತ – ನಮ್ಮ ದೇಹ

ಜೀವಲೋಕದ ಅದ್ಭುತ – ನಮ್ಮ ದೇಹ

0

ನಮ್ಮ ದೇಹವೇ ಒಂದು ಅದ್ಭುತ. ದೇಹ ಎನ್ನುವುದು ಒಂದು ಸುಂದರ ಕಟ್ಟಡ. ಜೀವಕೋಶಗಳೇ ಇದ ಇಟ್ಟಿಗೆಗಳು. ಈ ಕಟ್ಟಡದಲ್ಲಿ 50,000,000,000,000 ಇಟ್ಟಿಗೆಗಳಿವೆ. ಈ “ಜೀವಂತ ಕಟ್ಟಡ” ಆರಂಭವಾಗುವುದು ಒಂದೇ ಜೀವಕೋಶದಿಂದ ! ಕ್ರಮೇಣ ಕೋಟ್ಯಾಂತರ ಜೀವಕೋಶಗಳಾಗಿ ರೂಪುಗೊಂಡು, ದೇಹ ಬೆಳೆಯುತ್ತದೆ. ಈ ದೇಹದ ಜೀವಕೋಶಗಳು ಭೌತಿಕ ಹಾಗೂ ಮಾನಸಿಕ ಕಾರ್ಯಗಳನ್ನ ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ನಡೆಸುತ್ತದೆ. ನಮ್ಮ ದೇಹ ಸೆವೆದುಹೋದ ಅಂಗಗಳನ್ನು ಸರಿಪಡಿಸಿಕೊಂಡು ನೂರಾರು ರೀತಿಯ ಕಾಯಿಲೆಗಳನ್ನು ಸಮರ್ಥವಾಗಿ ಎದುರಿಸುತ್ತದೆ.


ಮನುಷ್ಯನ ದೇಹವನ್ನು ಯಂತ್ರಕ್ಕೆ ಹೋಲಿಸುತ್ತಾರೆ. ಆದರೆ ಇದು ಸಂಪೂರ್ಣವಾಗಿ ಯಂತ್ರವನ್ನು ಹೋಳುವುದಿಲ್ಲ. ನಮ್ಮ ದೇಹ ಮಾಡಬಲ ಎಲ್ಲ ಕೆಲಸಗಳನ್ನು ಯಂತ್ರ ಮಾಡುವುದಿಲ್ಲ. ಕೆಲಸ ಮಾಡಲು ಯಂತ್ರಕ್ಕೆ ಶಕ್ತಿ ಹೇಗೆ ಅಗತ್ಯವೋ, ಹಾಗೆಯೇ ದೇಹಕ್ಕೂ ಶಕ್ತಿ ಅಗತ್ಯ. ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವುದು ನಾವು ಸೇವಿಸುವ ಆಹಾರ.
ಆಧುನಿಕ ಯಂತ್ರಕ್ಕಿಂತ ಭಿನ್ನವಾಗಿ ನಮ್ಮ ದೇಹ ಬೆಳೆಯುತ್ತದೆ. ಅದು ಸೆವೆದುಹೋದ ಅಂಗಗಳನ್ನ ಸರಿ (ದುರಸ್ತಿ) ಪಡಿಸಿಕೊಳ್ಳುತ್ತದೆ. ಪ್ರತಿನಿತ್ಯ 6,000 ಕೋಟಿ ಜೀವಕೋಶಗಳು ಸೇವೆದು ಹೋಗಿ, ಸರಿಪಡಿಸಲ್ಪಡುತ್ತದೆ ! ಅಂದರೆ ದೇಹ ಸತತವಾಗಿ ಹೊಸ ಜೀವಕೋಶಗಳನ್ನು ಉತ್ಪಾದಿಸುತ್ತಿರುತ್ತದೆ. 15 ರಿಂದ 30 ದಿನಗಳಿಗೊಂದು ಬಾರಿ ಚರ್ಮ ಬೇರೆ ಹೊರಪದರವನ್ನು ತೊಡಿಸುತ್ತದೆ !
ನೂರಾರು ಕಾಯಿಲೆಗಳನ್ನು ತಡೆಗಟ್ಟಿ ಎದುರಿಸಬಲ್ಲ ಶಕ್ತಿ ನಮ್ಮ ದೇಹಕ್ಕಿದೆ. ಸಣ್ಣ ಗಾಯಗಳಿಂದ ಉಂಟಾದ ಹಾನಿಯನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. ಹೃದಯ, ಮೂತ್ರಪಿಂಡಗಳ ರೀತಿಯ ಕೆಲವು ಅಂಗಗಳು ಒಂದೇ ಸಮನೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. 70 ವರ್ಷ ವಯಸ್ಸಿನ ಮುದುಕನ ದೇಹದಲ್ಲಿರುವ ಹೃದಯ, ಆತನ ಜೀವಿತಕಾಲದಲ್ಲಿ 46 ಮಿಲಿಯನ್ ಗ್ಯಾಲನ್ (174 ದಶಲಕ್ಷ ಲೀಟರ್) ರಕ್ತವನ್ನು ಸಂಚರಿಸುತ್ತದೆ ! ಇದರ ಜೊತೆಗೆ ಆತನ ಮೂತ್ರಪಿಂಡಗಳು ಒಂದು ಮಿಲಿಯನ್ ಗಿಂತ ಹೆಚ್ಚು (3.8 ಮಿಲಿಯನ್ ಲೀಟರ್) ಕಲ್ಮಶ ವಸ್ತುಗಳನ್ನು ರಕ್ತದಿಂದ ಬೇರ್ಪಡಿಸುತ್ತದೆ !
ನಮ್ಮ ಮೆದುಳು ನಮ್ಮನ್ನು ಬೇರೆ ಎಲ್ಲ ಪ್ರಾಣಿಗಳಿಂದ ಬೇರ್ಪಡಿಸಿದೆ. ಮೆದುಳು ಆ ಸಾಧಾರಣವಾದ ಒಂದು ಅಂಗ. ನಮ್ಮ ದೇಹಕ್ಕಿಂತಲೂ ಸಮರ್ಥವಾಗಿ ಕೆಲಸ ಮಾಡಬಲ್ಲ ಯಂತ್ರಗಳನ್ನು ಸೃಷ್ಟಿಸುವ ಶಕ್ತಿ ಇದಕ್ಕಿದೆ. ಮೆದುಳಿನ ಶಕ್ತಿ ಮನುಷ್ಯನನ್ನ ಬೇರೆ ರೀತಿಯ ಪರಿಸರ ಗಳಿಗೆ ಹೊಂದಿಕೊಳ್ಳುವಂತೆ ಮಾಡಿದೆ.
ನಮ್ಮ ಪರಿಸರದಲ್ಲಿ ಶಾಖ, ಬೆಳಕು, ಶಬ್ದ, ವಾಸನೆ, ರುಚಿ, ಗಡಸುತನ ಅಥವಾ ಮೃದುತ್ವಕ್ಕೆ ಸಂಬಂಧಿಸಿದ ಪ್ರಚೋದನೆಗಳನ್ನು ಪಂಚೇಂದ್ರಿಗಳು (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ) ಗ್ರಹಿಸಿ ನರಗಳ ಮೂಲಕ ಮೆದುಳಿಗೆ ತಲುಪಿಸುತ್ತದೆ. ಮೆದುಳು ಅವಗಳಲ್ಲಿ ಪ್ರತಿಕ್ರಿಯೆಗಳಾಗಿ ನಿರ್ದಿಷ್ಟ ಅಂಗಗಳಿಗೆ ರವಾನಿಸುತ್ತದೆ. ಈ ಪಂಚೇಂದ್ರಿಯಗಳ ಪೈಕಿ ಮೂಗು ಅತಿ ಕಡಿಮೆ ವಿಕಾಸಹೊಂದಿರುವ ಅಂಗವಾದರೂ, ಸಾವಿರಾರು ರೀತಿಯ ವಾಸನೆಗಳನ್ನ ಕಂಡುಹಿಡಿಯಬಲ್ಲದು.
ನಮ್ಮ ಮೆದುಳು ಹೊರಗಿನ ಪ್ರಚೋದನೆಗಳನ್ನ ಮಾತ್ರವೇ ಅಲ್ಲದೆ ದೇಹದ ಒಳಗೆ ಆಗುವ ಶಾಖ ಮುಂತಾದ ಬದಲಾವಣೆಗಳನ್ನು ಗಮನಿಸಿ, ತಕ್ಕಹಾಗೆ (ಸೂಕ್ತ ರೀತಿಯಲ್ಲಿ) ಸ್ಪಂದಿಸುತ್ತದೆ.
ನಮ್ಮ ದೇಹ ಒಂದು ದೇಶ ಇದ್ದ ಹಾಗೆ. ಹಳ್ಳಿಗಳು ಸೇರಿ ತಾಲೂಕು, ತಾಲೂಕುಗಳು ಸೇರಿ ಜಿಲ್ಲೆಗಳು, ಜಿಲ್ಲೆಗಳು ಸೇರಿ ರಾಜ್ಯ, ರಾಜ್ಯಗಳು ಸೇರಿ ದೇಶ ಆಗುತ್ತದೆ. ಹೀಗೆಯೇ, ನಮ್ಮ ದೇಹದ ಕೋಟ್ಯಾಂತರ ಜೀವಕೋಶಗಳು (ಸೆಲ್) ಸೇರಿ ಅಂಗಾಂಶಗಳು (ಟಿಶ್ಯು), ಅಂಗಾಂಶಗಳು ಸೇರಿ ಅಂಗಗಳು (ಆರ್ಗನ್), ಅಂಗಗಳು ಸೇರಿ ಅಂಗವಸ್ಥೆ (ಆರ್ಗನ್ ಸಿಸ್ಟಮ್) ಅಂಗವ್ಯವಸ್ಥೆಗಳು ಸೇರಿ ದೇಹ ಆಗುತ್ತದೆ.
ದೇಹ ಮತ್ತು ಮನಸ್ಸು ಒಂದರೊಳಗೊಂದು ಇದ್ದು ಅವಿಭಾಜ್ಯವಾಗಿದೆ. ದೇಹವು ಇರದಿದ್ದರೆ ಮನಸ್ಸು ಸ್ವತಂತ್ರವಾಗಿ ಇರಲಾರದು. ಹಾಗೆಯೇ ʼಮನಸ್ಸುʼ ಇಲ್ಲದ ದೇಹ ಇರಲಾರದು. ಮನಸ್ಸು ದೇಹದ ಅಗೋಚರವಾದ ಒಂದು ಅಂಗ.
ದೇಹದ ಆರೋಗ್ಯವನ್ನು ಕಾಪಾಡಿಕೊಂಡರೆ, ಮನಸ್ಸಿನ ಆರೋಗ್ಯವು ಚೆನ್ನಾಗಿರುತ್ತದೆ ಎಂದಿದ್ದಾರೆ ಪುರಾತನ ರೋಮನ್ನರು.
ʼMens sane in corpore sanoʼ. ಇದನ್ನೇ ಇಂಗ್ಲಿಷರು ʼSound mind in a sound bodyʼ ಅಂದರು.
ಮೆದುಳಿನ ಕಾರ್ಯಗಳೇ ಮನಸ್ಸಿನ ಕಾರ್ಯಗಳು ಎಂಬ ಭಾವನೆ ಈಗ ಬಲವಾಗಿದೆ. ಮನಸ್ಸು ದೇಹದ ಪ್ರತಿಯೊಂದು ಅಂಗದಲ್ಲಿ ಇರುವುದೆಂದೂ ಅದರ ಕೇಂದ್ರಸ್ಥಾನ ಹೃದಯವೊಂದು ಅರಿಸ್ಟಾಟಲ್ ಪ್ರತಿಪಾದಿಸಿದ. ಮನಸ್ಸಿನ ಒಂದು ಭಾಗವು ದೇಹದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮದಂತೆಯೇ (ಪಂಚೇಂದ್ರಿಯಗಳಂತೆಯೇ) ಆರನೆಯ ಅಂಗವಾಗಿದೆ.
ಗ್ರೀಕ್ ನ ತತ್ತ್ವಜ್ಞಾನಿ ಅರಿಸ್ಟಾಟಲ್ ಮನಸ್ಸು ಮತ್ತು ಆತ್ಮ ಒಂದೇ ಅರ್ಥಕೊಡುವ ಎರಡು ಪದಗಳೆಂದು, ಜೀವನದ ಮುಖ್ಯತತ್ವ ಇವುಗಳಲ್ಲಿ ಇದೆ, ಎಂದು ಹೇಳಿದ.
ಇದೇ ಅಭಿಪ್ರಾಯವನ್ನು ನಾವು ಆಚಾರ್ಯ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಈ ಕೆಳಗಿನ ಪದ್ಯದಲ್ಲಿ ಕಾಣಬಹುದು.-
ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು |
ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು |
ಹಮ್ಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸೆ |
ನಮ್ಮ ಗುರಿ ಗೈದಿಪುವು – ಮಂಕುತಿಮ್ಮ.

“ಈ ದೇಹವನ್ನ ಕಲುಷಿತವಾದ ಹುತ್ತ (ವಲ್ಮೀಕ)ವೆಂದು, ಹೀಯಾಳಿಸದಿರು. ಇದನ್ನ ಬ್ರಹ್ಮನ ಆವಾಸಸ್ಥಾನವೆಂದು ನಮ್ಮ ಪೂರ್ವಿಕರಾದ ಋಷಿಗಳು ಹೇಳಿದ್ದಾರೆ. ಉತ್ಸಾಹವುಳ್ಳ (ಹಮ್ಮುಳ್ಳ) ಕುದುರೆಯನ್ನು (ಹಯ) ಚೆನ್ನಾಗಿ ರಕ್ಷಿಸಿಕೊಂಡು, ಅದಕ್ಕೆ ಕಡಿವಾಣ ತೊಡಿಸಿದರೆ, ಅದು ನಮ್ಮನ್ನು ನಮ್ಮ ಗುರಿಗಳಿಗೆ ಸೇರಿಸುತ್ತದೆ. ನಮ್ಮ ದೇಹವನ್ನು ಸರಿಯಾಗಿ ಕಾಪಾಡಿಕೊಂಡು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಕೊಂಡರೆ ನಾವು ಪರಮಾತ್ಮನನ್ನು ಸೇರುವ ಗುರಿಯನ್ನು ಮುಟ್ಟಬಹುದು.”
ಬನ್ನಿ ಈಗ ನಮ್ಮ ದೇಹದ ಕುರಿತು ಕೆಲವು ಸ್ವಾರಸ್ಯಕರ ವಿಷಯಗಳನ್ನು ನೋಡೋಣ.