ಮೈಸೂರು: ವಿಜಯನಗರ ಸಾಮ್ರಾಜ್ಯ ಆಚರಿಸಿಕೊಂಡು ಬಂದಿದ್ದ ದಸರಾ ಪದ್ದತಿಯನ್ನು ಮೈಸೂರಿನ ಮಹಾರಾಜರು ಮುಂದುವರೆಸಿಕೊಂಡು ಬರುವ ಮೂಲಕ ಈಡೀ ಜಗತ್ತು ಮೈಸೂರಿನತ್ತ ನೋಡುವಂತೆ ಮಾಡಿದ್ದಾರೆ. ಇದಕ್ಕೆ ಮೈಸೂರು ಮಹಾರಾಜರಿಗಿದ್ದ ನಾಡಿನ ಬಗ್ಗೆ ಇದ್ದ ಅಭಿಮಾನವೇ ಕಾರಣ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್. ಕೆ ಪಾಟೀಲ್ ಅವರು ಹೇಳಿದರು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಪಾರಂಪರಿಕ ಉಡುಗೆಯಲ್ಲಿ ನೂತನ ದಂಪತಿಗಳಿಗಾಗಿ ಆಯೋಜಿಸಿದ್ದ ಪಾರಂಪರಿಕ ಟಾಂಗಸವಾರಿಯ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜು,ಮಹಾಪೌರರಾದ ಶಿವಕುಮಾರ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತಾ ಸುನೀಲ್ ಬೋಸ್ ದಂಪತಿಗಳಿಗೆ ಬಾಗಿನ ನೀಡುವ ಮೂಲಕ ಉದ್ಘಾಟಿಸಿದ ನಂತರ ಮಾತನಾಡಿದರು.
ಕನ್ನಡ ನಾಡಿಗೆ ಹಬ್ಬವಾಗಿರುವ ದಸರಾ ಮೈಸೂರಿಗಾಗಲಿ, ನಾಡಿಗಾಗಲಿ ಸೀಮಿತವಾಗಿಲ್ಲ ವಿಶ್ವವಿಖ್ಯಾತವಾಗಿರುವ ದಸರಾ ಈಡೀ ವಿಶ್ವಕ್ಕೆ ಶ್ರೇಷ್ಠವಾಗಿದೆ. ರಾಜ್ಯದ ಮುಖ್ಯಂಮತ್ರಿಗಳಾದ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ದಸರಾ ಮಹೋತ್ಸವದ ಬಗ್ಗೆ ಅಪಾರ ಕಾಳಜಿ ವಹಿಸಿದ್ದು, ದಸರಾ ಯಶಸ್ವಿಯಾಗಲು ಶ್ರಮಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಒಟ್ಟು 25 ಸಾವಿರ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳಿವೆ. ಇವುಗಳಲ್ಲಿ 500 ರಿಂದ 600 ಪಾರಂಪರಿಕ ಕಟ್ಟಡಗಳನ್ನು ಸರ್ಕಾರ ಗುರುತಿಸಿದೆ. ಇನ್ನೂ 500 ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ ಉಳಿಸಿ ಸಂರಕ್ಷಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಎಲ್ಲಾ ಪಾರಂಪರಿಕ ಕಟ್ಟಡಗಳಾಗಲಿ, ಸ್ಮಾರಕಗಳನ್ನಾಗಲಿ ಸರ್ಕಾರ ಒಂದೆ ಮಾಡಲು ಆಗಲ್ಲ. ಅದಕ್ಕೆ ಜನಸಾಮಾನ್ಯರ ಅಭಿಮಾನ ಹಾಗೂ ಸಹಕಾರ ಬೇಕಾಗುತ್ತದೆ ಎಂದು ಹೇಳಿದರು.
ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು ನಿಮ್ಮ ಊರಿನಲ್ಲಿಯೇ ಇದ್ದರೆ ಅಂತಹ ಸ್ಮಾರಕವನ್ನೂ ರಕ್ಷಿಸುವ ಹಕ್ಕು ನಿಮಗಿರುತ್ತದೆ ಹಾಗೂ ದತ್ತು ತೆಗೆದುಕೊಂಡು ರಕ್ಷಿಸಬಹುದಾಗಿದೆ. ಇಂತಹ ಕಟ್ಟಡಗಳನ್ನು ರಕ್ಷಿಸಲು ಜನರನ್ನು ಉತ್ತೇಜಿಸಲು ರಾಜ್ಯ ಸರ್ಕಾರವು “ನಮ್ಮ ಸ್ಮಾರಕಗಳ ದತ್ತು ಕಾರ್ಯಕ್ರಮ”ವನ್ನು ಹಮ್ಮಿಕೊಂಡಿದ್ದು, ಅದು ಯಶಸ್ವಿಯಾಗಿ ಸಾಗುತ್ತಿದೆ ಎಂದರು.
ಅಮೇರಿಕಾದ ಅನಿವಾಸಿ ಭಾರತಿಯರೊಡನೆ ಆನ್ ಲೈನ್ ಮೂಲಕ (ಜೂಮ್ ಮಿಟಿಂಗ್) ಪಾರಂಪರಿಕ ಕಟ್ಟಡಗಳ ದತ್ತು ತೆಗೆದುಕೊಳ್ಳುವ ಸಂಬಂದ ಚರ್ಚಿಸಿದ್ದೆನೆ. ಇದರಿಂದಾಗಿ ಸುಮಾರು 20 ಅನಿವಾಸಿ ಭಾರತೀಯರು ಪಾರಂಪರಿಕ ಕಟ್ಟಡಗಳನ್ನು ದತ್ತು ತೆಗೆದುಕೊಂಡು ಸಂರಕ್ಷಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯಕಾರ್ಯನಿರ್ವಹಕರಾದ ರಾಜಶೇಖರ್, ಸೇರಿದಂತೆ ಇತರರು ಹಾಜರಿದ್ದರು.