ಮೈಸೂರು: ರಾಜಕೀಯದಲ್ಲಿ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ. ಬಿಜೆಪಿಯವರು ಹತಾಶರಾಗಿದ್ದಾರೆ. ಆ ಪಕ್ಷದವರಿಗಿಂತಲೂ ಕುಮಾರಸ್ವಾಮಿ ಜಾಸ್ತಿ ಹತಾಶರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳುವಾಗ ಅಮೆರಿಕದಲ್ಲಿ ಕೂತಿದ್ದರು. ಇದಕ್ಕೆ ಏನನ್ನಬೇಕು? ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲೇ ಕಾಲ ಕಳೆದರು ಎಂದು ವ್ಯಂಗ್ಯವಾಡಿದರು.
ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಬಿಜೆಪಿಯವರೇ ಎಂದು ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಇದು ರೆಕಾರ್ಡ್ ಆಗಿದೆ. ಆ ದಾಖಲೆಗಳನ್ನು ಬೇಕಾದರೆ ಬಿಡುಗಡೆ ಮಾಡುತ್ತೇನೆ. ಸಚಿವರು ಹಾಗೂ ಶಾಸಕರನ್ನು ಭೇಟಿ ಮಾಡದೇ ಹೋಟೆಲ್ ನಲ್ಲಿ ಕೂತು ಈಗ ನನ್ನ ಮೇಲೆ ಆರೋಪಿಸುತ್ತಿದ್ದಾರೆ. ರಾಜಕೀಯವಾಗಿ ಹತಾಶರಾಗಿ ಬಾಯಿಗೆ ಬಂದಂತೆ ಮಾತಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ – ಜೆಡಿಎಸ್ ನದ್ದು ಕುರುಡರ ಕಥೆಯಾಗಿದೆ. ಇವರು ಅವರ ಮೇಲೆ, ಅವರು ಇವರ ಮೇಲೆ ಅವಲಂಬಿತರಾಗಿದ್ದಾರೆ. ಖಾಲಿ ಡಬ್ಬ ಮಾತ್ರ ಶಬ್ದ ಜಾಸ್ತಿ ಮಾಡುತ್ತದೆ. ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ ಎಂದು ಬಿಜೆಪಿ–ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ. ಸಂಪುಟ ವಿಸ್ತರಣೆ ಮೊದಲಾದ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು. ಸದ್ಯಕ್ಕೆ ಈ ರೀತಿಯ ಚರ್ಚೆಯಾಗಿಲ್ಲ ಎಂದು ಪ್ರತಿಕ್ರಿಯಿಸಿದರು.
ಶಾಸಕರಾದ ಕೆ. ಹರೀಶ್‌ಗೌಡ, ಡಿ. ರವಿಶಂಕರ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್ ಇದ್ದರು.
ಬಳಿಕ ತಮ್ಮ ನಿವಾಸದ ಬಳಿಗೆ ಬಂದಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.