ಬೆಂಗಳೂರು: ಹುಲಿ ಉಗುರು ವಿವಾದಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ಎಲ್ಲಾ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಹೇಳಿದ್ದಾರೆ.
ಬೆಂಗಳೂರಿನ ವಿವಿಧೆಡೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ ವಿಚಾರವಾಗಿ ಮಾಹಿತಿ ನೀಡಿದ ಅವರು, ಬುಧವಾರ ಬೆಂಗಳೂರಿನಲ್ಲಿ 5 ಕಡೆ ಶೋಧ ನಡೆಸಿದ್ದೇವೆ. ಯಾರ ಮೇಲೆ ದೂರು ಬಂದಿತ್ತೋ ಅವರ ಮನೆ ಮೇಲೆ ದಾಳಿ ಮಾಡಿದ್ದು, ಪೆಂಡೆಂಟ್ ವಶಕ್ಕೆ ಪಡೆದು ಕೊಳ್ಳಲಾಗಿದೆ ಎಂದು ಹೇಳಿದರು.
ವಶಕ್ಕೆ ಪಡೆದ ಪೆಂಡೆಂಟ್ ಗಳನ್ನು ಎಫ್ ಎಸ್ ಎಲ್ ಗೆ ಕಳುಹಿಸುತ್ತೇವೆ. ಅಲ್ಲಿಂದ ವರದಿ ಬಂದಮೇಲೆ ನಮಗೆ ಯಾವುದು ಹುಲಿ ಉಗುರು ಎನ್ನುವುದ ಖಾತರಿ ಆಗುತ್ತದೆ. ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್, ಗಿರಿ ಮನೆಗೆ ಹೋಗಿ ವಿಚಾರಣೆ ಮಾಡಿದ್ದೇವೆ. ನಿಖಿಲ್, ದರ್ಶನ್ ಅವರಿಂದ ವಶಕ್ಕೆ ಪಡೆದ ಉಗುರು ಮೇಲ್ನೋಟಕ್ಕೆ ಅಸಲಿ ಅಲ್ಲ ಎಂದು ಅನಿಸುತ್ತಿದೆ. ಜಗ್ಗೇಶ್ ಮನೆಯಲ್ಲಿ ಸಿಕ್ಕಿರುವುದು ತುಂಬಾ ಹಳೆಯದ್ದು, ಅದನ್ನು ಕೂಡ ಪರಿಶೀಲಿಸಲಾಗ್ತಿದೆ ಎಂದು ಅವರು ಹೇಳಿದರು.
ಉಗುರನ್ನು ಬದಲಾಯಿಸಿರುವ ಪ್ರಕರಣ ಕಂಡುಬಂದರೆ ಸಾಕ್ಷ್ಯ ನಾಶದಡಿ ಪ್ರಕರಣ ದಾಖಲಿಸುತ್ತೇವೆ. ಸಂತೋಷ್ ಕೇಸ್ ಅಲ್ಲಿ ಹೊಸ ಹುಲಿ ಉಗುರಾಗಿತ್ತು. ಹಾಗಾಗಿ ಬೇಗ ಪತ್ತೆಯಾಯ್ತು. ಜಗ್ಗೇಶ್ ಮನೆಯಲ್ಲಿ ಸಿಕ್ಕಿರುವುದು ತುಂಬಾ ಹಳೆಯದ್ದಾಗಿದೆ. ಹಾಗಾಗಿ ನಾವು ನೈಜತೆಯ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಜಗ್ಗೇಶ್ ಅವರ ಹಳೆಯ ವಿಡಿಯೋ ಸ್ಟೇಟ್ ಮೆಂಟ್ ಆಧಾರವಾಗಿಟ್ಟುಕೊಂಡು ನಾವು ಕ್ರಮಕೈಗೊಳ್ಳಲು ಆಗುವುದಿಲ್ಲ ಎಂದು ಕುಮಾರ ಪುಷ್ಕರ್ ಹೇಳಿದರು.
ದಾಳಿ ವೇಳೆ, ತಮ್ಮ ಬಳಿ ಇರುವುದು ನಕಲಿ ಉಗುರು ಎಂದು ನಮ್ಮ ಅಧಿಕಾರಿಗಳಿಗೆ ದರ್ಶನ್ ಹೇಳಿದ್ದಾರೆ. ಎಲ್ಲವನ್ನೂ ನಾವು ತನಿಖೆ ಮಾಡ್ತೇವೆ. ಎಲ್ಲ ತಪ್ಪಿತಸ್ಥರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.