ಮನೆ ದೇವಸ್ಥಾನ ದಾರುಕಾಸುರನ ಜನನ – ಅಟ್ಟಹಾಸ

ದಾರುಕಾಸುರನ ಜನನ – ಅಟ್ಟಹಾಸ

0

ದೇವತೆಗಳಿಗೂ – ರಾಕ್ಷಸರಿಗೂ ನಡೆದಂತಹ ಯುದ್ಧಗಳು ಪುರಾಣಪ್ರಸಿದ್ಧವಾಗಿದೆ. ಅವರವರ ಅಧಿಪತ್ಯವನ್ನು ಸ್ಥಾಪಿಸುವ ಸಲುವಾಗಿ ಯುದ್ಧಗಳು ನಡೆಯುತ್ತಿತ್ತು. ದೇವತೆಗಳು ಸೋತರೆ ಮಹಾವಿಷ್ಣುಗೆ ಮೊರೆಯಿಡುವುದೂ, ರಕ್ಕಸರು ಸೋತರೆ ತಪಸ್ಸನ್ನು ಮಾಡಿ ಬ್ರಹ್ಮನನ್ನು ಮೆಚ್ಚಿಸಿ, ವರ ಪಡೆದು, ಪುನರಪಿ ದೇವತೆಗಳನ್ನು ಸ್ವರ್ಗದಿಂದ ಹೊಡೆದೋಡಿಸುವುದು ಆವರ್ತನವಾಗಿ ನಡೆಯುತ್ತಿತ್ತು.

ಹೀಗೊಮ್ಮೆ ನಡೆದ ದೇವಾಸುರರ ಕಾಳಗದಲ್ಲಿ ರಕ್ಕಸ ವೀರರೆಲ್ಲಾ ಮಡಿದರು. ಅವರಲ್ಲಿ ಸ್ತ್ರೀಯರೆಲ್ಲರೂ ಪಾತಾಳಲೋಕಕ್ಕೆ ಪಲಾಯನ ಮಾಡಿದರು. ಅವರಲ್ಲಿ ʼದಾರುಮತಿʼ ಮತ್ತು ʼದಾನವತಿʼ ಎಂಬ ರಾಕ್ಷಸಿಯರಿಬ್ಬರು ಬ್ರಹ್ಮನಿಂದ ವರಪಡೆಯಲಿಕ್ಕಾಗಿ ಭೂಲೋಕಕ್ಕೆ ಆಗಮಿಸಿ, ತಪಸ್ಸಿಗೆ ಕುಳಿತರು. ಸ್ತ್ರೀಯರ ಬಗ್ಗೆ ಅನುಕಂಪಿತವಾದ ಬ್ರಹ್ಮದೇವನು ಅವರಿಗೆಲ್ಲ ಪುತ್ರ ಸಂತಾನವಾಗಿ, ರಕ್ಕಸಕುಲವು ಬಲಿಷ್ಠವಾಗುವಂತೆ ವರವನ್ನು ನೀಡಿದನು. ಹೀಗೆ ಹುಟ್ಟಿದವರಲ್ಲಿ ದಾರುಮತಿಯ ಮಗ ʼದಾರುಕʼನೆಂಬವನು, ದಾನವತಿಯ ಮಗ ʼದಾನವʼ ನೆಂಬವನು  ಪ್ರಮುಖರು.

ದಾರುಕಾಸುರನು ತನ್ನ ತಾಯಂದಿರ ಪ್ರೇರಣೆಯಂತೆ ಅಸೂರ ಸಾಮ್ರಾಜ್ಯದ ಪುನರ್ ಸ್ಥಾಪನೆಗಾಗಿ ವರ ಪಡೆಯಲು ಬ್ರಹ್ಮನ ಕುರಿತಾಗಿ ತಪಸ್ಸಿಗೆ ಕುಳಿತನು. ಅನೇಕ ಕಾಲವಾದರೂ ಪ್ರತ್ಯಕ್ಷನಾಗದ ಬ್ರಹ್ಮನನ್ನ ತೃಪ್ತಿಪಡಿಸಲು ಕೋಮಕುಂಡವನ್ನ ರಚಿಸಿ, ಅದರಲ್ಲಿ ತನ್ನ ಶಿರವನ್ನೇ ಕಡಿದು ಆಹುತಿ ನೀಡಲು ಮುಂದದಾಗ ದಾರುಕಾಸುನೆದುರು ಆತನು ಪ್ರತ್ಯಕ್ಷನಾದನು. ದಾರುಕಾಸುರನ ಆಗ್ರಹದಂತೆ ಆತನಿಗೆ ದೇವಾ-ದಾನವ-ನರರಿಂದಾಗಲೀ, ಪ್ರಾಣಿ- ಪಕ್ಷಿಗಳಿಂದಾಗಲಿ, ಹಗಲು-ರಾತ್ರಿ ವೇಳೆಯಲ್ಲಾಗಲಿ, ಸಾವು ಬಾರದಂತೆ ಹದಿನಾರುಸಾವಿರ ಆನೆಗಳ ಬಲವನ್ನು ಆತನ ರಕ್ತವು ನೆಲಕ್ಕೆ ಬಿದ್ದಾಗ ಪ್ರತಿ ಕಣದಿಂದಲೂ ಸಾವಿರಾರು ಪ್ರತಿದಾರುಕರು ಜನ್ಮಕ್ಕೆ ಬಂದು ಹೋರಾಡುವಂತೆಯೂ, ಅಲ್ಲದೆ ಬ್ರಹ್ಮ ಸೃಷ್ಟಿಯನೆಲ್ಲ ನಾಶಗೊಳಿಸುವ ಸಮರ್ಥ ಇರುವಂತಹ ಬ್ರಹ್ಮ ದಂಡವನ್ನು ಯಾರಿಂದಲೂ, ಯಾವತ್ತಿಗೂ, ರಣಗಾರಂಗದಲ್ಲಿ ಸೋಲು ಬಾರದಂತೆ ʼಮಾಯಮತಿʼ ಮತ್ತು ʼತಾಮಸಿʼ ಎಂಬ ವಿಶಿಷ್ಟ ಮಂತ್ರಗಳ ಉಪದೇಶವನ್ನು ವರದಾನವಾಗಿ ನೀಡಿದನು.

ಆದರೆ ದಾರುಕನು ಸ್ತ್ರೀಯರಿಂದ ಮರಣ ಬಾರದಿರಲಿ ಎಂಬ ವರವನ್ನು ಮಾತ್ರ ಕೇಳಲಿಲ್ಲ. ಅದಕ್ಕೆ ಕಾರಣವೇನೆಂದು ಬ್ರಹ್ಮದೇವನು ಅವನಲ್ಲಿ ಕೇಳಿದಾಗ ʼಸ್ತ್ರೀಯರೆಂದರೆ ಅಬಲೆಯರು. ಅವರಿಂದ ಮರಣ ಬೇಡವೆಂದು ನಿನ್ನೊಡನೆ ಯಾಚಿಸಿದರೆ ಸ್ತ್ರೀಯರಿಗೆ ಅವಮಾನ ಮಾಡಿದಂತೆʼ ಎಂದು ಮರು ನುಡಿದನು.

ವರಬಲದಿಂದ ಉನ್ಮತ್ತನಾದಂತಹ ದಾರುಕಾಸುರರು ತನ್ನವರನ್ನೆಲ್ಲಾ ಒಟ್ಟುಗೂಡಿಸಿ, ಪಡೆಯನ್ನಾಗಿಸಿ, ಅದಕ್ಕೆ ತಮ್ಮನಾದ ದಾನವನನ್ನು ಸೇನಾಪತಿಯನ್ನಾಗಿರಿಸಿಕೊಂಡು ದೇವಲೋಕಕ್ಕೆ ದಾಳಿಯಿಟ್ಟನು. ದೇವತೆಗಳನ್ನೆಲ್ಲಾ ಹೊಡೆದೋಡಿಸಿದನು. ದೇವಸ್ತ್ರೀಯರನೆಲ್ಲಾ ಕರೆತಂದು ರಕ್ಕಸಿಯರ ದಾಸಿಯರನ್ನಾಗಿರಿಸಿದನು. ಪಶ್ಚಿಮ ಸಮುದ್ರ ಮಧ್ಯದಲ್ಲಿ ಮಾಯಾಸುರನಿಂದ ʼದಾರುಕಾಪುರಿʼ ಎಂಬ ಮನೋಜ್ಞ ನಗರವನ್ನು ನಿರ್ಮಾಣಗೊಳಿಸಿದನು. ಶುಕ್ರಾಚಾರ್ಯರಿಂದ ʼಅಸುರ ಸಾಮ್ರಾಟʼ ಎಂದು ಅಭಿಷಿಕ್ತನಾದನು. ಮಾಯಾಸುರನ ಪುತ್ರಿಯಾದ ಮನೋದರಿ ಎಂಬಾಕೆಯನ್ನು ಆತನು ವಿವಾಹವಾದನು.