ಮನೆ ರಾಷ್ಟ್ರೀಯ ಕೇರಳದಲ್ಲಿ ಝಿಕಾ ವೈರಸ್​ ಪತ್ತೆ: ತಲಸ್ಸೆರಿ ನ್ಯಾಯಾಲಯದ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ

ಕೇರಳದಲ್ಲಿ ಝಿಕಾ ವೈರಸ್​ ಪತ್ತೆ: ತಲಸ್ಸೆರಿ ನ್ಯಾಯಾಲಯದ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ

0

ತಿರುವನಂತಪುರ: ಕೇರಳದಲ್ಲಿ ಝಿಕಾ ವೈರಸ್​ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್​ ಘೋಷಣೆ ಮಾಡಿ ಮುನ್ನೆಚ್ಚರಿಕೆ ವಹಿಸಿದೆ.

ಕಣ್ಣೂರ್​ ಜಿಲ್ಲೆಯ ತಲಸ್ಸೆರಿ ನ್ಯಾಯಾಲಯವನ್ನು ನಿಗೂಢ ಕಾಯಿಲೆ ಕಾಣಿಸಿಕೊಂಡಿತ್ತು. ಈ ಸಂಬಂಧ 22 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಈ ಮಾದರಿಯಲ್ಲಿ ಝಿಕಾ ವೈರಸ್​ ಪತ್ತೆಯಾಗಿದೆ ಎಂದು ಅಲಪ್ಪುಳ ವೈರಾಲಜಿ ಇನ್‌ ಸ್ಟಿಟ್ಯೂಟ್‌ ವರದಿ ನೀಡಿದೆ.

ತಲಸ್ಸೆರಿ ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಲ್ಲಿ ಜ್ವರ, ಕಣ್ಣು ಕೆಂಪಾಗುವಿಕೆ, ದೇಹದ ಊತ ಮತ್ತು ನೋವು ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿದ್ದವು. ದಿಢೀರ್​​ ಅನಾರೋಗ್ಯಕ್ಕೆ ಒಳಗಾದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಅನಾರೋಗ್ಯಕ್ಕೆ ಒಳಗಾದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಪರೀಕ್ಷೆಗೆ ಕಳುಹಿಸಲಾಗಿದ್ದು, ಇದೀಗ ಝಿಕಾ ಸೋಂಕು ಪಾಸಿಟಿವ್​ ಬಂದಿದೆ.

ಝಿಕಾ ವೈರಸ್​ ಈಡಿಸ್​ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕವಾಗಿದ್ದು, ಸೊಳ್ಳೆ ಕಡಿತದಿಂದ ಇದು ಹರಡುತ್ತದೆ. ಇದೀಗ ಝಿಕಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನವೆಂಬರ್​ 6ರಂದು ಮತ್ತೊಮ್ಮೆ ನ್ಯಾಯಾಲಯದ ಸಿಬ್ಬಂದಿಗಳನ್ನು ವೈದ್ಯಕೀಯ ತಪಾಸಣೆ ನಡೆಸಲಾಗುವುದು ಎಂದು ಘೋಷಿಸಲಾಗಿದೆ.

ಸೋಂಕು ಪತ್ತೆಯಾಗಿರುವ ಹಿನ್ನೆಲೆ ಕೋರ್ಟ್​​ ಆವರಣದಲ್ಲಿ ಸೊಳ್ಳೆ ವಿರೋಧಿ ಚಾಲನೆಗೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮುಂದಾಗಿದ್ದಾರೆ.

ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆ: ಆರೋಗ್ಯ ಇಲಾಖೆಯು ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಝಿಕಾ ಕಂಡು ಬಂದಿದೆ. ಆದರೆ, ಮನುಷ್ಯರಲ್ಲಿ ರೋಗದ ಲಕ್ಷಣಗಳು ಗೋಚರಿಸಿಲ್ಲ. ಗ್ರಾಮ ಸೇರಿದಂತೆ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಎಚ್ಚರಿಕೆ ವಹಿಸುತ್ತಿದೆ.