ಮನೆ ಆರೋಗ್ಯ ಧನುರ್ವಾತ

ಧನುರ್ವಾತ

0

ಇದು ಬಹಳ ಗಂಭೀರ ರೋಗ. ಅಲಕ್ಷ್ಯಮಾಡಿದರೆ  ಪ್ರಾಣಾಂತಕವಾಗಬಹುದು.

ಶರೀರದಲ್ಲಿ ಎಲ್ಲಿಯಾದರೂ ಗಾಯವಾದರೆ, ಇಲ್ಲವೇ ಸೋಂಕು ಉಂಟಾದರೆ ಸಕಾಲದಲ್ಲಿ ಸುಶ್ರೂಷೆಯನ್ನು ಮಾಡಿಕೊಳ್ಳಬೇಕು. Clostridium tetani ಎಂಬ ಸೂಕ್ಷ್ಮಜೀವಿಗಳು ಗಾಯದ ಮುಖಾಂತರ ಶರೀರವನ್ನು ಪ್ರವೇಶಿಸಿ, ಅಲ್ಲಿ ವೃದ್ಧಿಹೊಂದಿ, ಕೇಂದ್ರ ನರಮಂಡಲ (ಮೆದುಳು, ಬೆನ್ನೆಲುಬು) ವನ್ನು ಛಿದ್ರ ಛಿದ್ರ ಮಾಡುತ್ತದೆ.

Clostridium ಸೂಕ್ಷ್ಮಾಣುಗಳು ಹೆಚ್ಚಾಗಿ ಮಣ್ಣು, ಧೂಳು, ಬೂಜುಗಳಲ್ಲಿರುತ್ತದೆ. ನಮ್ಮ ಶರೀರದ ನಾಳಗಳಲ್ಲಿ ಕೂಡ ಇರಬಹುದು.

ಗಾಯದ ಮುಖಾಂತರ ಶರೀರವನ್ನು ಪ್ರವೇಶಿತು ಪ್ರವೇಶಿಸಿದ ಈ ಜೀವಾಣಗಳು, ಶರೀರದ ಕಣಗಳಿಗೆ ಸೋಂಕು ಉಂಟುಮಾಡಿ, ಅಪಾರವಾಗಿ ವೃದ್ಧಿಸಿಕೊಂಡು, ಮಾಂಸಖಂಡಗಳನ್ನು ನಿಯಂತ್ರಿಸುವ ನರಮಂಡಲವನ್ನು ನಿಷ್ಕ್ರಿಯಗೊಳಿಸುತ್ತದೆ.

ಪ್ರಪಂಚದಲ್ಲಿ ಮಿಲಿಯನ್ ಗಟ್ಟಲೆ ಜನರು ಈ ಮಾರಕರೋಗದಿಂದ ಬಳಲುತ್ತಿದ್ದಾರೆ. ಅವರಲ್ಲಿ ಶೇ. 50ಕ್ಕಿಂತ ಹೆಚ್ಚು ಜನ ಟೈಟನಸ್ ಲಸಿಕೆಯನ್ನು ತೆಗೆದುಕೊಳ್ಳುತ್ತಾರೆ.      

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹುಟ್ಟಿದ ಮಗುವಿನ ಹೊಕ್ಕಳ ಬಳ್ಳಿಯನ್ನು ಸೋಂಕುನಿವಾರಣ ದ್ರಾವಣ(antibiotic)ದಲ್ಲಿ ಅದ್ದಿದ ಶಸ್ತ್ರದಿಂದ ತುಂಡರಿಸದಿದ್ದರೆ, ಆ ಭಾಗ ಸೆಪ್ಟಿಕ್ ಆಗಿ ಧನುರ್ವಾತದಿಂದ ಮಗು ಸಾವನ್ನಪ್ಪುವ ಸಂಭವ ಇರುತ್ತದೆ.

ಲಕ್ಷಣಗಳು :-

*  ಧನುರ್ವಾತದ ಲಕ್ಷಣಗಳು : ಮೊದಲನೇದಾಗಿ ವ್ಯಕ್ತಿಯ ದವಡೆಯ ಮಾಂಸಖಂಡ (ಸ್ನಾಯುಗಳು) ಬಿಗಿದುಕೊಂಡು, ಬಾಯಿಯನ್ನು ತೆಗೆಯಲು ಅಶಕ್ತನಾಗುತ್ತಾನೆ. ಧನುರ್ವಾತ ಸೋಂಕುಟಾದಾಗ ಮಕ್ಕಳಿಗೆ ಹಾಲು ಕುಡಿಯಲು ಬಾಯಿಯನ್ನು ತೆರೆಯಲು ಆಗುವುದೇ ಇಲ್ಲ.       

* ಯಾರಿಗಾದರೂ ಗಾಯವಿಲ್ಲದೆ ಬಾಯಿ ಸರಿಯಾಗಿ ತೆಗೆಯಲಾಗದಿದ್ದಲ್ಲಿ, ಧನುರ್ವಾತದ ಲಕ್ಷಣ ಎಂದು ತಿಳಿಯಬೇಕು. ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಪ್ರಾಣಪಾಯ ತಪ್ಪಿತು.

ಇತರ ಲಕ್ಷಣಗಳು :-

* ಬೆನ್ನು, ಹೊಟ್ಟೆ, ಇತರ ಮಾಂಸಖಂಡಗಳು ಬಿಗಿದುಕೊಳ್ಳುವವು.

* ಮುಖದ ಮಾಂಸ ಖಂಡಗಳು ಸಂಕುಚಿತಗೊಳ್ಳುವುದರಿಂದ, ವ್ಯಕ್ತಿ ನಗುವುದನ್ನು ಕಷ್ಟಪಡುತ್ತಾನೆ.

* ನಾಡಿವೇಗ ಹೆಚ್ಚುವುದು

* ಸ್ವಲ್ಪ ಜ್ವರ

* ಉಗುಳು – ಬೆವರು ಬರುವುದು ಮೊದಲಾದವು.               

ಅವಧಿ (incubation period) :- 

*  ಸಾಮಾನ್ಯವಾಗಿ 6 ರಿಂದ 15 ದಿನಗಳ ಒಳಗಾಗಿ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಒಂದನೇ ದಿನದಿಂದ, ಕೆಲವು ತಿಂಗಳ ನಂತರ ಕಾಣಿಸಿಕೊಳ್ಳುವುದರಲ್ಲಿ ಆಶ್ಚರ್ಯವೇನೂ ಇಲ್ಲ.

* ಕಡಿಮೆ ಅವಧಿಯಲ್ಲಿ ಲಕ್ಷಣಗಳು ಗೋಚರವಾದರೆ ರೋಗ ತೀವ್ರವಾಗಿದೆ ಎಂದೇ ಅರ್ಥ.

ಎಷ್ಟು ಸಮಯದವರೆಗೆ ಕಾಡಬಹುದು ? :-

* ಮಾಂಸಖಂಡಗಳು ಬಿಗಿದುಕೊಂಡಿರುವುದು ಸಾಮಾನ್ಯವಾಗಿ 2-3 ವಾರದಗಳವರೆಗೂ ಇರಬಹುದು.

* ಒಂದು ತಿಂಗಳಿನ ತನಕ ಕೆಲವು ಮಾಂಸಖಂಡಗಳು ಬಿಗಿದುಕೊಂಡಿರಬಹುದು.   

ಕಾರಣಗಳು :-

ಮೇಲೆ ಹೇಳಿದಂತೆ clostridium tetani ಎನ್ನುವ ಸೂಕ್ಷ್ಮ ಜೀವಾಣುಗಳೇ ಇದಕ್ಕೆ ಕಾರಣ.

ಜಟಿಲತೆಗಳು (complications) :-

* ಶ್ವಾಸಕೋಶಗಳು ಸ್ಥಗಿತವಾಗುವುದು (choking)

* ನ್ಯುಮೋನಿಯಾ

ಮನೆಮದ್ದು :-

* ಇದಕ್ಕೆ ಮನೆಮದ್ದು ಇಲ್ಲವೇ ಇಲ್ಲ. ಡಾಕ್ಟರನ್ನು ಕೂಡಲೇ ಸಂಪರ್ಕಿಸುವುದೇ ದಾರಿ. ಅದು ಅವಶ್ಯಕತೆ ಹೌದು.

* ನಿಮಗೆ ಉಂಟಾದ ಗಾಯ ವಾರಗಟ್ಟಲೆ ಮಾಯಾದಿದ್ದಲ್ಲಿ, ಧನುರ್ವಾತದ ಕಾರಣವೆಂದು ಅನುಮಾನಿಸಿ ತಕ್ಷಣ ವೈದ್ಯರ ಭೇಟಿ ಮಾಡಿ.         

ಡಾಕ್ಟರ್ ಸಲಹೆ :-

*  ಗಾಯವನ್ನು ಶುಭ್ರವಾಗಿ ಸ್ವಚ್ಛಗೊಳಿಸುತ್ತಾರೆ.

* ಧನುರ್ವಾತದ ಬ್ಯಾಕ್ಟೀರಿಯ ಉಂಟುಮಾಡುವ ವಿಷಯವನ್ನು ನಿಷ್ಕ್ರಿಯ ಮಾಡಲು ಸರಿಯಾದ ಇಂಜೆಕ್ಷನ್ ಕೊಡುತ್ತಾರೆ.

* ಮಾಂಸ ಖಂಡಗಳು ಬಿಗಿದುಕೊಳ್ಳದಿರಲು ಔಷಧ ತೆಗೆದುಕೊಳ್ಳಲು ಸೂಚಿಸುತ್ತಾರೆ.

* ಉಸಿರಾಡಲು ತೊಂದರೆ ಇದ್ದಲ್ಲಿ, ಶ್ವಾಸನಾಳದಲ್ಲಿ ರಂಧ್ರಮಾಡಿ ಅದರೊಳಗೆ ಒಂದು ಉಸಿರಾಟದ ಕೊಳವೆಯನ್ನು ಅಳವಡಿಸುತ್ತಾರೆ. (breathing tube). ಈಗ ಉಸಿರಾಡಲು ಅನುಕೂಲವಾಗುತ್ತದೆ ಇದನ್ನು tracheotomy ಎನ್ನುತ್ತಾರೆ.

ಮುನ್ನೆಚ್ಚರಿಕೆಗಳು :-

* ಧನುರ್ವಾತ ಬರದಿರುವಂತೆ ತಡೆಯಲು ಲಸಿಕೆಗಳಿವೆ. ಡಿಪಿಟಿ ಎಂದು ಕರೆಯಲ್ಪಡುವ, ಈ ಲಸಿಕೆಯನ್ನು ಮಕ್ಕಳಿಗೆ ಮೊದಲನೆಯದನ್ನು ಮೂರನೇ ವರ್ಷದಲ್ಲಿ, ಎರಡನೆಯದನ್ನು 4ನೇ ವರ್ಷದಲ್ಲಿ ಮತ್ತು ಮೂರನೆಯದನ್ನ ಐದು ವರ್ಷದಲ್ಲಿ ನೀಡಬೇಕು.

* ಡಿಪಿಟಿ ಚುಚ್ಚುಮದ್ದು, ಡಿಫೀರಿಯಾ, ನಾಯಿಕೆಮ್ಮು ಮತ್ತು ಧನುರ್ವಾತ ಬಾರದಂತೆ ತಡೆಯುತ್ತದೆ. ಮೂರು ಮತ್ತು ಐದನೇ ವಯಸ್ಸಿನಲ್ಲಿ ಬೂಸ್ಟರ್ ಡೋಸ್ ಹಾಕಿಸುವುದು.     

* ಬಹಳ ಮಂದಿ ಡಿಪಿಟಿ ಚುಚ್ಚುಮದ್ದನ್ನು ಹಾಕಿಸಿದ ನಂತರ ಧೈರ್ಯದಿಂದ ಸುಮ್ಮನಿರುತ್ತಾರೆ. ಅದು ಸರಿಯಲ್ಲ.     

* ನಿಮಗೆ ಗಾಯವಾಗಲಿ, ಆಗದಿರಲಿ ಪ್ರತಿ 5 ವರ್ಷಕ್ಕೊಮ್ಮೆ ಟಿಟಿ (tetanus toxide) ಇಂಜೆಕ್ಷನ್ ತೆಗೆದುಕೊಳ್ಳಲೇಬೇಕು. ಇದರಿಂದ ಜೀವನವಿಡಿ ಧನುರ್ವಾತದಿಂದ ದೂರವಿರಬಹುದು.

ಜಾಗರೂಕತೆ :-

* ಮಣ್ಣು, ದೂಳು, ತುಕ್ಕು, ಕಬ್ಬಿಣದೊಳಗೆ ಧನುರ್ವಾತದ ಸೂಕ್ಷ್ಮಜೀವಿಗಳು ಯಥೇಚ್ಛವಾಗಿರುತ್ತದೆ. ನಿಮಗೇನಾದರೂ ಗಾಯವಾಗಿದ್ದು ಅದರಲ್ಲಿ ಮಣ್ಣು, ಧೂಳಿದ್ದರೆ, ಕೂಡಲೇ ಗಾಯವನ್ನ ಸೋಪಿನಿಂದ ತೊಳೆದು ಸ್ವಚ್ಛಗೊಳಿಸಿ, ಟಿಟಿ ಇಂಜೆಕ್ಷನ್ ಹಾಕಿಸಿಕೊಳ್ಳುವುದು ಉತ್ತಮ.    

* ಧನುರ್ವಾತ ಗಾಯಗಳಿಂದಲ್ಲದೆ, ಒಮ್ಮೊಮ್ಮೆ ಬಾಯಲ್ಲೋ ಗಂಟಲಿನಲ್ಲೋ ಇರುವ ಹುಣ್ಣಿ(ulcer)ನಿಂದ ಕೂಡ ಬರಬಹುದು.