ಮನೆ ಕಾನೂನು ದಾವಣಗೆರೆ: ಡಿಡಿಎಲ್ ಆರ್ ಇಲಾಖೆಯ ವ್ಯವಸ್ಥಾಪಕ ಲೋಕಾಯುಕ್ತರ ಬಲೆಗೆ

ದಾವಣಗೆರೆ: ಡಿಡಿಎಲ್ ಆರ್ ಇಲಾಖೆಯ ವ್ಯವಸ್ಥಾಪಕ ಲೋಕಾಯುಕ್ತರ ಬಲೆಗೆ

0

ದಾವಣಗೆರೆ: ಜಮೀನಿನ ಚೆಕ್ ಬಂದಿ, ಪೋಡಿ ಸಂಖ್ಯೆ ಸರಿಪಡಿಸಲು ಮುಂಗಡವಾಗಿ ಐದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಡಿಡಿಎಲ್ಆರ್ ಇಲಾಖೆಯ ಕಚೇರಿ ವ್ಯವಸ್ಥಾಪಕರನ್ನು ಗುರುವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಡಿಡಿಎಲ್ಆರ್ ಇಲಾಖೆಯ ಕಚೇರಿ ವ್ಯವಸ್ಥಾಪಕ ಕೇಶವಮೂರ್ತಿ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ.

ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಕೆ.ಎಸ್. ಮೀನಾಕ್ಷಮ್ಮ ಎಂಬುವರ ಸರ್ವೆ 65/ 7 ರ ಜಮೀನಿನ 12 ಗುಂಟೆ ಪ್ರದೇಶದ ಚೆಕ್ ಬಂಧಿ ಮತ್ತು ಪೋಡಿ ನಂಬರ್ ಅದಲು ಬದಲು ಆಗಿತ್ತು. ಸರಿಪಡಿಸಿಕೊಡುವಂತೆ ಮೀನಾಕ್ಷಮ್ಮ ಅವರ ಪರವಾಗಿ ಪಿ.ಜಿ. ಮುನಿಯಪ್ಪ ಎಂಬುವರು ಡಿಡಿಎಲ್ಆರ್ ಇಲಾಖೆಯ ಕಚೇರಿ ವ್ಯವಸ್ಥಾಪಕರಿಗೆ ಅರ್ಜಿ ಸಲ್ಲಿಸಿದ್ದರು. ಸರಿಪಡಿಸಲು ಕೇಶವಮೂರ್ತಿ 40 ಸಾವಿರದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 30 ಸಾವಿರಕ್ಕೆ ಕೆಲಸ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು.‌

ಈತನ್ಮಧ್ಯೆ ಮುನಿಯಪ್ಪ ಅವರು ಲಂಚದ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಗುರುವಾರ ಸಂಜೆ ಕೇಶವಮೂರ್ತಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲೇ ಮುಂಗಡವಾಗಿ ಐದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲ ಪೂರೆ, ವೃತ್ತ ನಿರೀಕ್ಷಕರಾದ ಎಚ್.ಎಸ್. ರಾಷ್ಟ್ರಪತಿ, ಸಿ. ಮಧುಸೂದನ್, ಪ್ರಭು ಬಿ. ಸೂರಿನ, ಸಿಬ್ಬಂದಿಗಳಾದ ವೀರೇಶಯ್ಯ, ಧನರಾಜ್, ಗಣೇಶ್, ಕೋಟಿನಾಯ್ಕ, ಕೃಷ್ಣ ನಾಯ್ಕ, ಬಸವರಾಜ್ ದಾಳಿಯಲ್ಲಿ ಪಾಲ್ಗೊಂಡಿದ್ದರು.