ಮನೆ ರಾಜ್ಯ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ:  ಮಾರ್ಗಸೂಚಿ ಪ್ರಕಟ.

ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ:  ಮಾರ್ಗಸೂಚಿ ಪ್ರಕಟ.

0
ಸಾಂದರ್ಭಿಕ ಚಿತ್ರ

ಬೆಂಗಳೂರು:  ದೀಪಾವಳಿ  ಹಬ್ಬ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಹಲವು ಷರತ್ತುಗಳನ್ನ ಹಾಕಲಾಗಿದ್ದು ಈ ಸಂಬಂಧ ರಾಜ್ಯ ಪೊಲೀಸ್​ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪಟಾಕಿ  ಅವಘಡ ತಡೆಯಲು ಸುಪ್ರೀಂಕೋರ್ಟ್ ​​ನ ಆದೇಶ ಪಾಲನೆ ಕಡ್ಡಾಯವಾಗಿದ್ದು,  ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಈ ಕೆಳಕಂಡ ಮಾರ್ಗಸೂಚಿಗಳನ್ನ  ಪಟಾಕಿ ಮಾರಾಟಗಾರರು ಪಾಲಿಸಬೇಕು.

ಸುಪ್ರಿಂ ಕೋರ್ಟ್​ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.

ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಇರಬೇಕು ಹಾಗೂ ಕ್ಯೂಆರ್ ಕೋಡ್ ಸಹ ಇರಬೇಕು. ಕಚೇರಿಯಿಂದ ಪರವಾನಿಗೆ ಪತ್ರ ಪಡೆದಿರುವವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು. ಪ್ರತಿಯೊಂದು ಮಳಿಗೆಗಳಲ್ಲಿ ಕಚೇರಿಯಿಂದ ನೀಡಿರುವ ಪರವಾನಿಗೆ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು. ಮಾರಾಟ ಮಳಿಗೆಗಳಲ್ಲಿ ಭಾರತೀಯ ತಯಾರಿಕಾ ಕಂಪನಿಗಳ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವುದು. ವಿದೇಶಿ ತಯಾರಿಕ ಪಟಾಕಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿದೆ.

ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಪ್ರತಿಯೊಂದು ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ಇದರಿಂದ ಅಪಘಾತ ಸಂದರ್ಭದಲ್ಲಿ ಮಳಿಗೆಗಳನ್ನು ಪರಿಸ್ಥಿತಿಗನುಗುಣವಾಗಿ ಪ್ರವೇಶಿಸಿ, ಒಳಗಿದ್ದವರನ್ನು ರಕ್ಷಿಸಬಹುದು ಹಾಗೂ ಅವಶ್ಯಕತೆ ಬಿದ್ದರೆ ಮಳಿಗೆಗಳನ್ನು ಒಡೆದು ಒಳ ಪ್ರವೇಶಿಸಬಹುದು. ಪ್ರತಿಯೊಂದು ಮಳಿಗೆಗಳ ಗಾತ್ರ 10 x 10 ಅಡಿಗೆ ಸೀಮಿತಗೊಳಿಸಿರಬೇಕು ಮತ್ತು ಒಳಗೆ ಯಾವುದೇ ಹೆಚ್ಚಿನ ದಾಸ್ತಾನಿನ ವ್ಯವಸ್ಥೆ ಇರಬಾರದು.

ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಧನಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿಯದ್ದಾಗಿರಬಾರದು. ಸಾಧ್ಯವಾದರೆ ಬೆಂಕಿಯನ್ನು ತಡೆಗಟ್ಟುವ ಸಾಧನಗಳನ್ನೇ ನಿರ್ಮಾಣಕ್ಕೆ ಉಪಯೋಗಿಸಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 3 ಮೀಟರ್ ಅಂತರವಿರಬೇಕು ಹಾಗೂ ಮಾರಾಟ ಮಳಿಗೆಯು ಯಾವುದೇ ರಕ್ಷಿತ ಕಾರ್ಯದಿಂದ ಅಥವಾ ಸ್ಥಳದಿಂದ 50 ಮೀಟರ್ ದೂರದಲ್ಲಿರಬೇಕು.

ಪ್ರತಿಯೊಂದು ಮಳಿಗೆಗಳಲ್ಲಿ ಕೆಳಗೆ ಸೂಚಿಸಿರುವ ಅಗ್ನಿ ನಿವಾರಣಾ ಹಾಗೂ ಅಗ್ನಿಶಮನ ವ್ಯವಸ್ಥೆ ಇರಬೇಕು. ಪ್ರತಿಯೊಂದು ಮಳಿಗೆಯಲ್ಲಿ ಒಂದು 9 ಲೀಟರ್ ಸಾಮರ್ಥ್ಯದ ವಾಟರ್ ಪ್ರಜರ್ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್‌ಗಳಲ್ಲಿ ನೀರನ್ನು ಇಟ್ಟಿರಬೇಕು. ಪ್ರತಿಯೊಂದು ಮಳಿಗೆ ಪಕ್ಕದಲ್ಲಿ ಎರಡು ಡ್ರಮ್‌ ನಲ್ಲಿ ಕನಿಷ್ಟ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು ಹಾಗೂ ಬೆಂಕಿ ನಂದಿಸಲು ಸಾಕಷ್ಟು ಮರಳನ್ನು ಶೇಖರಿಸಿ ಇಟ್ಟಿರಬೇಕು.

ಮಳಿಗೆಯಲ್ಲಿ ಅಡಿಗೆ ಅಥವಾ ಧೂಮಪಾನಕ್ಕೆ ಅವಕಾಶ ನೀಡಬಾರದು ಸಂಬಂಧಿತ ಸೂಚನಾ ಫಲಕವನ್ನು ಹಾಕಿರಬೇಕು. ಪಟಾಕಿಗಳನ್ನು ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟ ಮಾಡುವುದು. ರಾತ್ರಿ ವೇಳೆ ಮಳಿಗೆಯಲ್ಲಿ ಯಾರು ಮಲಗದಂತೆ ನೋಡಿಕೊಳ್ಳತಕ್ಕದ್ದು. ಪರವಾನಿಗೆದಾರರು ಕಚೇರಿಯಿಂದ ನೀಡಿರುವ ಪರವಾನಗಿಯಲ್ಲಿ ನಿಗಧಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಮಳಿಗೆ ಹಾಕಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.