ಮನೆ ದೇವಸ್ಥಾನ ವಡಕುಂದ ಶಿವಕ್ಷೇತ್ರ

ವಡಕುಂದ ಶಿವಕ್ಷೇತ್ರ

0

ವಡಕುಂದ ತಟಾಕದ ಎದುರಿಗೆ ತೆಂಕುಭಾಗವಾಗಿ ಶ್ರೀ ಶಿವನ ದೇವಾಲಯವಿದೆ. ಶಿವಮಹಾದೇವನು ಮಗಳಾದ ಭಗವತಿಗೆ ಶುಚಿರ್ಭೂತೆಯಾಗಲು ತಾಟಕವನ್ನು ನಿರ್ಮಿಸಲು ತ್ರಿಶೂಲವನ್ನು ಊರಿ ನಿಂತ ಸ್ಥಳವೇ ಈ ದೇವಾಲಯವೆಂದು ಪೌರಾಣಿಕವಾಗಿ ಹೇಳಲಾಗಿದೆ. ಹಿಂದೆ ಇಲ್ಲಿ ಸ್ವಯಂಭೂಲಿಂಗವಿತ್ತೆಂದೂ ಕ್ರಮೇಣ ಪೂಜಾದಿಗಳಿಲ್ಲದೆ ಪಾಳುಬಿದ್ದಿತೆಂದೂ ತಿಳಿದು ಬರುತ್ತದೆ. ಈ ಕ್ಷೇತ್ರದ ಸುತ್ತಲೂ ಮಾತ್ರ ಕಗ್ಗಲುಗಳಿತ್ತೆಂದೂ ಆ ಕಗ್ಗಲ್ಲುಗಳಿಂದಲೇ ಶಿವನ ಗುಡಿ, ಗೋಪುರಗಳನ್ನು ನಿರ್ಮಿಸಲಾಗಿತ್ತೆಂದು ಈಗ ತೆಗೆದಿರಿಸಿದ ಕಗ್ಗಲ್ಲುಗಳ ಅವಶೇಷಗಳನ್ನುಕಾಣುವುದರಿಂದ ತಿಳಿಯಬಹುದಾಗಿದೆ. ದೇಗುಲದ ಬಡಗುಭಾಗದಲ್ಲಿ ಹಿಂದೆ ಋಷಿಗಳು ಯಜ್ಞ  ಯಾಗಾದಿಗಳನ್ನು ಮಾಡುತ್ತಿದ್ದ ಹೋಮಕುಂಡಗಳನ್ನು ಕಾಣಬಹುದು. ಈ ಕುಂಡಗಳಿಗೆ ಆವರಣ ಬೇಲಿಯನ್ನು ನಿರ್ಮಿಸಲಾಗಿದೆ. ಮಾಡಾಯಿಕಾವ್ ಕ್ಷೇತ್ರದಲ್ಲಿ ಶಿವನು ಶಾಕ್ತೇಯವಾಗಿ ಪಿಡಾರ ಬ್ರಾಹ್ಮಣರಿಂದ ಪೂಜೆಗೊಳ್ಳುತ್ತಿರುವುದರಿಂದ ಮಡಿವಂತರಾದ ನಂಬೂದಿರಿಗಳು ಕ್ಷೇತ್ರ ಪ್ರವೇಶ ಮಾಡುತ್ತಿರಲಿಲ್ಲ. ಆ ಬಗ್ಗೆ ಅವರು ಕೋಲತ್ತಿರಿ ರಾಜ್ಯದಲ್ಲಿ ದೂರಿಕೊಂಡಾಗ ರಾಜರು ತಾಟಕದ ಸನಿಹದಲ್ಲಿ ಪ್ರತ್ಯೇಕವಾದ ಶಿವದೇವಾಲಯಗಳನ್ನು ನಿರ್ಮಿಸಿ, ನಂಬೂದಿರಿಗಳಿಂದ ವೈದಿಕ ಪೂಜೆ ಏರ್ಪಡಿಸಿದನು ಎಂಬ ಇನ್ನೊಂದು ಹೇಳಿಕೆಯೂ ಇದೆ. ಕೋಲತ್ತೀರಿ ರಾಜರ 36 ಕ್ಷೇತ್ರಗಳಲ್ಲಿ ಇದು ಒಂದಾಗಿದೆಯೆಂದು ಉಲ್ಲೇಖವಿದೆ.

ತೀರಾ ಶಿಥಿಲಗೊಂಡಿದ್ದ ಈ ದೇವಸ್ಥಾನವನ್ನು ಊರ ಭಕ್ತಾದಿಗಳು ಒಟ್ಟುಸೇರಿ ನವೀಕರಣಗೊಳಿಸಿ ಶಿವಲಿಂಗವನ್ನು ಪುನಃ ಪ್ರತಿಷ್ಠಾಪಿಸಿ ಬ್ರಹ್ಮಕಲಶ ನಡೆಸಲಾಗಿದೆ. ಸಂಪೂರ್ಣ ಕೆಂಗಲ್ಲುಗಳಿಂದಲೇ ನಿರ್ಮಿಸಲಾದ ಈ ಕ್ಷೇತ್ರವು ಸುತ್ತುಗೋಪುರದ ಕೆಲಸಾದಿಗಳು ನಡೆಯುತ್ತಿದೆ. ದೇಗುಲದ ಒಳಾಂಗಣದಲ್ಲಿ ಕನ್ನಿಮೂಲೆಯನ್ನು ಗಣಪತಿ ಮತ್ತು ಹೊರಾಂಗಣದ ಕನ್ನಿಮೂಲೆಯನ್ನು ಶಾಸ್ತಾರನ ಪ್ರತಿಷ್ಠೆಯಿದೆ. ಧನುಮಾಸದ ತಿರುವಾದಿರ (ಆರ್ದ್ರ) ನಕ್ಷತ್ರದಂದು ಧ್ವಜಾರೋಹಣವಾಗಿ ಆರು ದಿನಗಳ ಉತ್ಸವವು ಜರಗುತ್ತದೆ. ಕೊನೆಯ ದಿವಸ ವಡಕುಂದ ತಟಾಕದಲ್ಲಿ ಆರಾಟುತ್ಸವ ನಡೆಯುತ್ತದೆ.

ಮಾಡಾಯಿಕಾವಿಲಮ್ಮನ ದರ್ಶನಕ್ಕೆ ಆಗಮಿಸಿದ ಹೆಚ್ಚಿನ ಭಕ್ತರೂ ಇಲ್ಲಿಗಾಗಮಿಸಿ ಶಿವನ ದರ್ಶನ ಪಡೆಯುತ್ತಾರೆ. ಈ ಕ್ಷೇತ್ರದಲ್ಲಿ ನಿರಮಾಲ,  ತ್ರಿಕಾಲಪೂಜೆ, ಅಷ್ಟದ್ರವ್ಯ, ಗಣಪತಿ ಹೋಮ, ಮೃತ್ಯುಂಜಯ ಹೋಮ, ರುದ್ರಾಭಿಷೇಕ, ಶಿವಪೂಜೆ, ಗಣಪತಿ ಹೋಮ, ಕರುಕ ಹೋಮ ಮೊದಲಾದವುಗಳು ಪ್ರಧಾನ ಸೇವೆಗಳಾಗಿವೆ.

ಕದಿರ್ ಕಟ್ಟ :-

ಕದಿರ್ ಎಂದರೆ ಭತ್ತದ ಪೈರು. ಶ್ರೀ ಮಾಡಾಯಿಕಾವ್ ಕ್ಷೇತ್ರದಲ್ಲಿ ಕರ್ಕಾಟಕ ಮಾಸದಲ್ಲಿ ನೀರ ತುಂಬಿಸುವುದಾಗಿದೆ. ಕ್ಷೇತ್ರದಿಂದ ಅನತಿ ದೂರದಲ್ಲಿ ತೆಂಗು ಭಾಗವಾಗಿ ಆವರಣವಿರುವ ಒಂದು ತೆರೆಯಿದೆ. ಇದಕ್ಕೆ ʼಕದಿರ್ ತರʼ ಎಂದು ಹೆಸರು. ನಿರ ಸಾಧನಗಳನ್ನು ಮೊಗೇರ ಸಮುದಾಯದವರು ಸಂಗ್ರಹಿಸಿ ತಂದು ಇಲ್ಲಿ ಇಡುವುದಾಗಿದೆ. ಇಲ್ಲಿಂದ ನಿರದ ಪೂರ್ವಾಹ್ನ ವಾದ್ಯಘೋಷದಿಂದ ಶ್ರೀ ಕ್ಷೇತ್ರಕ್ಕೆ ಕೊಂಡೊಯ್ಯುದಾಗಿದೆ.