ಮನೆ ಸ್ಥಳೀಯ ವೀರರಾಣಿ ಒನಕೆ ಓಬವ್ವಳ ದೇಶಪ್ರೇಮ ಸ್ವಾಮಿನಿಷ್ಠೆ ಅಗಾಧವಾದದ್ದು:  ಟಿ.ಎಸ್ ಶ್ರೀವತ್ಸ

ವೀರರಾಣಿ ಒನಕೆ ಓಬವ್ವಳ ದೇಶಪ್ರೇಮ ಸ್ವಾಮಿನಿಷ್ಠೆ ಅಗಾಧವಾದದ್ದು:  ಟಿ.ಎಸ್ ಶ್ರೀವತ್ಸ

0

ಮೈಸೂರು: ವೀರರಾಣಿ ಒನಕೆ ಓಬವ್ವಳಂತಹ ನಾಡಿನ ಮಹನೀಯರನ್ನು ಕೇವಲ ಜಾತಿ ಸಮುದಾಯಗಳಿಗೆ ಮೀಸಲಿರಿಸದೆ ಅವರ  ದೇಶಪ್ರೇಮ, ಸ್ವಾಮಿನಿಷ್ಠೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನೆನೆಯಬೇಕು ಎಂದು ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸರವರು ತಿಳಿಸಿದರು.

ಇಂದು ನಗರದ ಕರ್ನಾಟಕ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಚಿತ್ರದುರ್ಗದ ಕೋಟೆಯಂದಾಕ್ಷಣ ಎಲ್ಲರಿಗೂ ಒನಕೆ ಓಬವ್ವಳ ಹೆಸರು ನೆನಪಿಗೆ ಬರುತ್ತದೆ. ಇದು ಆಕೆ ತೋರಿದ ದೇಶಭಕ್ತಿಯ ಪ್ರತೀಕ ಎಂದರು.

ವಿಧಾನ ಪರಿಷತ್ತಿನ ಶಾಸಕರಾದ ಸಿಎನ್ ಮಂಜೇಗೌಡ ಅವರು ಮಾತನಾಡಿ, ಒನಕೆ ಓಬವ್ವಳಂತಹ ವೀರ ಕನ್ನಡತಿ ಜಯಂತಿ ಆಚರಣೆ ಬಹಳ ಮಹತ್ವಪೂರ್ಣದಾಗಿದ್ದು, ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾಗಬೇಕಿದೆ ಎಂದರು.

ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಆರ್ ಲೋಕನಾಥ್ ರವರು ಮಾತನಾಡಿ ಇಂದಿನ ಮಹಿಳೆಯರಲ್ಲಿ ಒನಕೆ ಓಬವ್ವಗಳ ಆತ್ಮಸ್ಥೈರ್ಯ ಕೆಚ್ಚೆದೆಯ ದಿಟ್ಟತನ, ಗಟ್ಟಿತನ ಮರುಕಳಿಸಲಿ ಎಂದು ಆಶಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಬಾಸುದೇವ ಸೋಮಾನಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಟಿ ರಮೇಶ್ ಅವರು ಮಾತನಾಡಿ, ಚರಿತ್ರೆಯ ಪುಟಗಳಲ್ಲಿ ಒನಕೆ ಓಬವ್ವಳ ಹೆಸರು ಅಚ್ಚಳಿಯದಂತೆ ಉಳಿದಿದೆ. ಹೈದರಾಲಿ ಸೈನ್ಯವನ್ನು ಹಿಮ್ಮೆಟ್ಟಿಸಿ ಅತ್ಯಂತ ವೀರಾವೇಶದಿಂದ ಹೋರಾಡಿ, ವೀರ ಮದಕರಿ ನಾಯಕರ ಸೈನ್ಯಕ್ಕೆ ಯಶಸ್ಸು ತಂದುಕೊಟ್ಟ ಕೀರ್ತಿ ಅಂದಿಗೆ ಒನಕೆ ಓಬವ್ವಳಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಮಹಾಪೌರರಾದ ಡಾ. ಜಿ ರೂಪ, ಆಡಳಿತ ವಿಭಾಗದ ಉಪ ಆಯುಕ್ತರಾದ  ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್ ಸೇರಿದಂತೆ ಇತರರು ಭಾಗವಹಿಸಿದ್ದರು.