ಮನೆ ಯೋಗಾಸನ ಉತ್ತಾನಾಸನ

ಉತ್ತಾನಾಸನ

0

ʼಉತ್ʼ ಎಂಬುದು ವಿಸರ್ಗ, ಅದರರ್ಥ ಬಲತ್ಕಾರದಿಂದ ಮೇಲೆತ್ತು ಎಂದು.  ʼತಾನʼ ಎಂದರೆ ಸೆಳೆ, ಜಗ್ಗಿಎಳೆ, ಲಂಬಿಸು. ಈ ಆಸನದಲ್ಲಿ ಉದ್ದೇಶಪೂರ್ವಕವಾಗಿ ಬೆನ್ನೆಲುಬಿಗೆ ತೀವ್ರ ಎಳೆತವನ್ನು ಕೊಟ್ಟಂತಾಗುತ್ತದೆ.

ಅಭ್ಯಾಸ ಕ್ರಮ :-

೧. ಮೊದಲು ತಡಾಸನದಲ್ಲಿ ನಿಂತು. ಮಂಡಿಗಳನ್ನ ಬಿಗಿಗೊಳಿಸಬೇಕು.

೨. ಉಸಿರನ್ನು ಹೊರಗೆ ಬಿಟ್ಟು ಮುಂಭಾಗಿ, ಕೈಬೆರಳುಗಳನ್ನು ನೆಲದ ಮೇಲೆ ಊರಿಡಬೇಕು. ಬಳಿಕ ಅಂಗೈಗಳೆರಡನ್ನೂ ಪಾದಗಳ ಸಮೀಪದಲ್ಲಿ ಅವುಗಳ ಹಿಮ್ಮಡಿಗಳ ಹಿಂದೆ ನೆಲದ ಮೇಲೆ ಊರಿ ನಿಲ್ಲಬೇಕು. ಆದರೆ ಕಾಲುಗಳನ್ನು ಮಂಡಿಗಳ ಹತ್ತಿರ ಭಾಗಿಸಬಾರದು.

೩. ಈಗ ತಲೆಯನ್ನು ಮೇಲೆತ್ತಿ ನಿಲ್ಲಿಸಿ, ಬೆನ್ನುಮೂಳೆಯನ್ನು ಹಿಗ್ಗಿಸಲು ಯತ್ನಿಸಬೇಕು. ಟೋಂಕಗಳನ್ನು ತಲೆಯ ಕಡೆಗಡ ಸ್ವಲ್ಪ ಮುಂದೂಡಿ, ಕಾಲುಗಳ ನೆಲಕ್ಕೆ ಲಂಬವಾಗುವಂತೆ ನೇರವಾಗಿ ಅವನ್ನು ನಿಲ್ಲಿಸಬೇಕು.

೪. ಈ ಭಂಗಿಯಲ್ಲಿ ಎರಡು ಸಲ ಆಳವಾಗಿ ಉಸಿರಾಡುವಷ್ಟು ಕಾಲ ನಿಲ್ಲಬೇಕು.

೫. ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು, ದೇಹದ ಮುಂಡಭಾಗವನ್ನು ಕಾಲುಗಳ ಹತ್ತಿರಕ್ಕೆ ಸರಿಸಿ, ತಲೆಯನ್ನು ಮಂಡಿಗಳ ಮೇಲೆ ಒರಗಿಸಿಡಬೇಕು.

೬. ಮಂಡಿಗಳಲ್ಲಿಯ ಬಿಗುವನ್ನು ಸಡಿಲಿಸದೆ, ಮಂಡಿ ಚಿಪ್ಪುಗಳನ್ನು ಮೇಲ್ಸೆಳೆದು ನಿಲ್ಲಬೇಕು. ಈ ಭಂಗಿಯಲ್ಲಿ, ಸುಮಾರು ಒಂದು ನಿಮಿಷವಿದ್ದು, ಆಗ ಆಳವಾದ ಮತ್ತು ಸಮವಾದ ಉಸಿರಾಟಕ್ಕೆ ಎಡೆಗೊಡೆಬೇಕು.

೭.  ಇದಾದಮೇಲೆ ಉಸಿರನ್ನು ಒಳಕ್ಕೆಳೆದು, ಮಂಡಿಗಳಲ್ಲಿ ಒರಗಿಸಿಟ್ಟಿದ್ದ ತಲೆಯನ್ನು ಮೇಲೆತ್ತಬೇಕು. ಆದರೆ ಅಂಗೈಗಳನ್ನು ನೆಲದಿಂದ ಮೇಲೆತ್ತಬಾರದು.

೮. ಎರಡು ಸಲ ಉಸಿರಾಟ ನಡೆಸಿದಮೇಲೆ ನೀಳವಾಗಿ ಉಸಿರನ್ನು ಒಳಕ್ಕೆಳೆದು, ನೆಲದಿಂದ ಕೈಗಳನ್ನ ಮೇಲೆತ್ತಿ, ತಾಡಾಸನದ ಸ್ಥಿತಿಗೆ ದೇಹವನ್ನು ತರಬೇಕು.

ಪರಿಣಾಮಗಳು :-

ಈ ಆಸನಭ್ಯಾಸವು ಹೊಟ್ಟೆನೋವನ್ನು ನೀಗಿಸಿ, ಪಿತ್ತಕೋಶ, ಗುಲ್ಮ, ಮತ್ತು ಮೂತ್ರಪಿಂಡಗಳಿಗೆ ಹುರುಪು ಕೊಡುತ್ತದೆ. ಅಲ್ಲದೆ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಬರುವ ನೋವು ಕಳೆದುಬಿಡುತ್ತದೆ. ಅಲ್ಲದೆ ಎದೆಬಡಿತ ವೇಗವನ್ನು ಕಡಿಮೆ ಮಾಡಿ, ಬೆನ್ನಿನೊಳಗಿನ ನರಮಂಡಲಕ್ಕೆ ಶಕ್ತಿ ಹೆಚ್ಚಿಸಲು ಈ ಅಭ್ಯಾಸವು ಸಹಾಯಮಾಡುತ್ತದೆ. ಬಲುಬೇಗ ಮನಸ್ಸಿಗೆ ಗಾಬರಿಗೊಳ್ಳುವವರಿಗಂತೂ ಈ ಆಸನಾಭ್ಯಾಸವು ಒಂದು ಸಿದ್ದೌಷದವೇ ಸರಿ. ಏಕೆಂದರೆ, ಇದು ಮೆದುಳಿನ ಜೀವ ಕಣಗಳಿಗೆ ಉಪಶಮನವನ್ನು ಒದಗಿಸುತ್ತದೆ. ಈ ಆಸನಾಭ್ಯಾಸ ಮುಗಿದ ಮೇಲೆ ಅಭ್ಯಾಸಿಯು ಶೈತ್ಯಶಾಂತಿಗಳನ್ನನುಭವಿಸುವುದಲ್ಲದೆ, ಅವನ ಕಣ್ಣುಗಳಿಗೆ ಹೊಳಪು ಹಚ್ಚುತ್ತದೆ. ಮನಸ್ಸಿಗೆ ಶಾಂತಿ ದೊರಕುತ್ತದೆ.

ʼಶೀರ್ಷಾಸನʼದ ಅಭ್ಯಾಸದಲ್ಲಿ ತೊಡಗಿರುವವರಿಗೆ ತಲೆಭಾರ, ದೇಹದಲ್ಲಿ ಅಸ್ವಸ್ಥತೆ, ಭಾವೋದ್ರೇಕಗಳು ತಲೆದೋರುವುದಾದರೆ, ಅಂಥವರು ಈ ಉತ್ತಾನಾಸನವನ್ನು ಮೊದಲು ಮಾಡಿ ಮುಗಿಸಿದಲ್ಲಿ ಶೀರ್ಷಾಸನದ ಅಭ್ಯಾಸವನ್ನು ಸುಲಭ ರೀತಿಯಲ್ಲಿ ಕೈವಶ ಮಾಡಿಕೊಳ್ಳಬಹುದು.