ಮನೆ ಅಪರಾಧ ಆಸ್ತಿಗಾಗಿ ಪತ್ನಿ ಕೊಲೆ: ಮಂಡ್ಯ ಖಾಸಗಿ ಕಾಲೇಜು ಉಪನ್ಯಾಸಕನ ಬಂಧನ

ಆಸ್ತಿಗಾಗಿ ಪತ್ನಿ ಕೊಲೆ: ಮಂಡ್ಯ ಖಾಸಗಿ ಕಾಲೇಜು ಉಪನ್ಯಾಸಕನ ಬಂಧನ

0

ಮಂಡ್ಯ: ಖಾಸಗಿ ಕಾಲೇಜಿನ ಉಪನ್ಯಾಸಕ ಆಸ್ತಿ ಆಸೆಗಾಗಿ ತನ್ನ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ಮಂಡ್ಯದ ವಿವಿ ನಗರದಲ್ಲಿ ನಡೆದಿದೆ.

ಇಲ್ಲಿನ ಖಾಸಗಿ ಕಾಲೇಜಿನ ಉಪನ್ಯಾಸಕ ಟಿ.ಎನ್. ಸೋಮಶೇಖರ್ (41) ತನ್ನ ಪತ್ನಿ ಶ್ರೀಮತಿ ಎಸ್.ಶ್ರುತಿ (32) ಯನ್ನು ನ. 11ರಂದು ಹತ್ಯೆಗೈದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.   

ಮೈಸೂರಿನ ಹೆಬ್ಬಾಳ ನಿವಾಸಿಗಳಾದ ಪಿ.ಷಣ್ಮುಖ ಸ್ವಾಮಿ ಮತ್ತು ರಾಜೇಶ್ವರಿ ದಂಪತಿ ಪುತ್ರಿ ಶೃತಿಯನ್ನು ಕೆಲ ವರ್ಷಗಳ ಹಿಂದೆ ಮಂಡ್ಯ ವಿವಿ ನಗರದ ನಾಗರಾಜಪ್ಪ ಪುತ್ರ ಟಿ.ಎನ್. ಸೋಮಶೇಖರ್ ಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸ್ಥಿತಿವಂತರಾಗಿದ್ದ ಶ್ರುತಿಯ ಪೋಷಕರು ಆಕೆಗೆ ಮೈಸೂರಿನ ವಿಜಯನಗರ ಮೊದಲ ಹಂತದಲ್ಲಿ ಮೂರು ಅಂತಸ್ತಿನ ಮನೆಯನ್ನು ನೀಡಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಆ ಮನೆಯನ್ನು ತನ್ನ ಹೆಸರಿಗೆ ಬರೆದು ಕೊಡುವಂತೆ ಸೋಮಶೇಖರ್ ಪತ್ನಿಯನ್ನು ಪೀಡಿಸುತ್ತಿದ್ದ. ಆತನ ಕಿರುಕುಳ ಹೆಚ್ಚಾದಾಗ ಕೆಲವೊಮ್ಮೆ ರಾಜಿ, ಪಂಚಾಯಿತಿಗಳು ನಡೆದಿತ್ತು. ಈ ನಡುವೆ ಶೃತಿ ತಂದೆ ಷಣ್ಮುಖ ಸ್ವಾಮಿ ಮತ್ತು ತಾಯಿ ರಾಜೇಶ್ವರಿ ಅವರುಗಳು ಎರಡು ವರ್ಷದ ಅಂತರದಲ್ಲಿ ನಿಧನವಾಗಿದ್ದಾರೆ. ಅದು ಮಾತ್ರವಲ್ಲದೆ, ಈ ದಂಪತಿಯ ಮತ್ತೋರ್ವ ಪುತ್ರಿ ಸುಶ್ಮಿತಾ ಕೂಡ ಅದಾದ ಆರೇ ತಿಂಗಳಲ್ಲಿ ನಿಧನ ಹೊಂದಿದ ಕಾರಣ ಷಣ್ಮುಖ ಸ್ವಾಮಿಯ ಸಂಪೂರ್ಣ ಅಸ್ತಿ ಶೃತಿ ಹೆಸರಿಗೆ ವರ್ಗಾವಣೆಯಾಗಿತ್ತು.

ಕೋಟ್ಯಾಂತರ ರೂ ಮೌಲ್ಯದ ಆಸ್ತಿಯನ್ನು ತನ್ನದಾಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸೋಮಶೇಖರ್ ತನ್ನ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಆದರೆ ಆಕೆ ಯಾವುದೇ ಕಾರಣಕ್ಕೂ ಪತಿಯ ಹೆಸರಿಗೆ ಆಸ್ತಿಯನ್ನು ಬರೆದ ಕೂಡದೇ ಕೋಟ್ಯಂತರ ಮೌಲ್ಯದ ತನ್ನ ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಲು ಬಯಸಿದ್ದಳು ಎನ್ನಲಾಗಿದೆ.

ಈಕೆ ಜೀವಂತವಾಗಿದ್ದರೆ ತನಗೆ ಆಸ್ತಿ ದೊರೆಯುವುದಿಲ್ಲ. ಆಕೆಯನ್ನು ಹತ್ಯೆ ಮಾಡಿಬಿಟ್ಟರೆ ಸಹಜವಾಗಿಯೇ ತನ್ನ ಹೆಸರಿಗೆ ಬರುತ್ತದೆ ಎಂದು ಯೋಚಿಸಿದ್ದ ಸೋಮಶೇಖರ್, ನರಕ ಚತುರ್ದಶಿಯಂದು (ನ11) ರಾತ್ರಿ ಶೃತಿ ಮಲಗಿದ್ದಾಗ ಅವರ ಮುಖದ ಮೇಲೆ ದಿಂಬು ಹಾಕಿ ಅದುಮಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ.

ನಂತರ ಶ್ರುತಿಯ ಚಿಕ್ಕಪ್ಪ ಪಿ.ಕುಮಾರಸ್ವಾಮಿ ಅವರ ಮೊಬೈಲ್ ಕರೆ ಮಾಡಿದ ಈತ, ಶ್ರುತಿಗೆ ಲೋ-ಬಿಪಿಯಾಗಿದ್ದು ಆಕೆ ಸ್ಥಿತಿ ಚಿಂತಾಜನಕವಾಗಿದೆ, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ ಎಂದು ಹೇಳಿದ್ದಾನೆ.

ಈ ಸಂದರ್ಭದಲ್ಲಿ ದೂರದ ಊರಿನಲ್ಲಿದ್ದ ಕುಮಾರಸ್ವಾಮಿಯವರು ಶ್ರುತಿಯನ್ನು ಒಳ್ಳೆಯ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು. ಬೆಳಗಾಗುವುದರೊಳಗೆ ತಾವು ಮಂಡ್ಯಗೆ ಬರುವುದಾಗಿಯೂ ತಿಳಿಸಿದ್ದಾರೆ. ನ.12 ರಂದು ಮುಂಜಾನೆ ಕುಮಾರಸ್ವಾಮಿ ಹಾಗೂ ಕುಟುಂಬದವರು ಆಗಮಿಸುವಷ್ಟರಲ್ಲಿ ಸೋಮಶೇಖರ್ ಮನೆ ಮುಂದೆ ಪತ್ನಿ ಶವನ್ನು ಇಟ್ಟು ಅದರ ಮೇಲೆ ಹೂವಿನಹಾರನ್ನು ಹಾಕಿರುವುದು ಕಂಡು ಬಂದಿದೆ. ಲೋ-ಬಿಪಿಯಿಂದಲೇ ಆಕೆ ಎರಡು ಗಂಟೆ ಮುಂಚಿತವಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಎಂದು ಆತ ಹೇಳಿದನಾದರೂ, ಅವರ ಮನೆ ಬಳಿ ಇದ್ದ ವೈದ್ಯರೊಬ್ಬರು ವೃತ್ತ ದೇಹವನ್ನು ಪರೀಕ್ಷಿಸಿ ನೋಡಿ ಆಕೆ ಸುಮಾರು 5 ರಿಂದ 6ಗಂಟೆ ಮುಂಚಿತವಾಗಿ ಸಾವನ್ನಪ್ಪಿರಬಹುದು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಹೇಳಿದ್ದರಿಂದ ಅನುಮಾನ ಗೊಂಡ ಕುಮಾರಸ್ವಾಮಿ, ಆಸ್ತಿ ಕಬಳಿಸುವ ಉದ್ದೇಶದಿಂದ ಶ್ರುತಿ ಪತಿ ಸೋಮಶೇಖರ್, ಅತ್ತೆ ನೀಲಾಂಬಿಕೆ ಮತ್ತು ಅತ್ತಿಗೆ ಹೇಮಲತ ಅವರು ಹತ್ಯೆ ಮಾಡಿರಬಹುದು ಎಂಬ ಸಂಶಯ ವ್ಯಕ್ತಪಡಿಸಿ ಮಂಡ್ಯ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದರು.

ಮರಣೋತ್ತರ ಪರೀಕ್ಷೆಯ ಪ್ರಾರ್ಥಮಿಕ ವರದಿಯನ್ವಯ ಶ್ರುತಿಯನ್ನು ಉಸಿರುಗಟ್ಟಿ ಸಾಯಿಸಿರಬಹುದು ಎಂಬುದು ಗೊತ್ತಾಗುತ್ತಿದ್ದಂತೆ ಪೊಲೀಸರು ಸೋಮಶೇಖರ್ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಅಸ್ತಿ ಆಸೆಗಾಗಿ ಪತ್ನಿಯನ್ನು ಹತ್ಯೆ ಮಾಡಿದ್ದಾಗಿ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.