ಮನೆ ಮನರಂಜನೆ ಹಾಸ್ಯ ನಟ ಧರ್ಮಣ್ಣ ಹೀರೋ ಆಗಿ ನಟಿಸಿದ ‘ರಾಜಯೋಗ’ ಸಿನಿಮಾ ನ.17ರಂದು ಬಿಡುಗಡೆ

ಹಾಸ್ಯ ನಟ ಧರ್ಮಣ್ಣ ಹೀರೋ ಆಗಿ ನಟಿಸಿದ ‘ರಾಜಯೋಗ’ ಸಿನಿಮಾ ನ.17ರಂದು ಬಿಡುಗಡೆ

0

ಅನೇಕ ಹಾಸ್ಯ ನಟರು ಈಗಾಗಲೇ ಹೀರೋ ಆಗಿ ಯಶಸ್ಸು ಕಂಡಿದ್ದಾರೆ. ಅಂಥವರ ಸಾಲಿಗೆ ನಟ ಧರ್ಮಣ್ಣ ಕೂಡ ಸೇರ್ಪಡೆ ಆಗುತ್ತಿದ್ದಾರೆ. ‘ರಾಮಾ ರಾಮಾ ರೇ’ ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದ ಧರ್ಮಣ್ಣ ಅವರು ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದರು.

ಸ್ಟಾರ್​ ಹೀರೋಗಳ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಒದಗಿಬಂತು. ಈಗ ‘ರಾಜಯೋಗ’ ಸಿನಿಮಾ ಮೂಲಕ ಅವರು ಹೀರೋ ಆಗಿದ್ದಾರೆ. ಇದೇ ಶುಕ್ರವಾರ (ನವೆಂಬರ್​ 17) ಈ ಸಿನಿಮಾ ರಿಲೀಸ್​ ಆಗುತ್ತಿದೆ.

 ‘ರಾಜಯೋಗ’ ಸಿನಿಮಾಗೆ ಲಿಂಗರಾಜ ಉಚ್ಚಂಗಿದುರ್ಗ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು, ನಿರ್ದೇಶನ ಕೂಡ ಮಾಡಿದ್ದಾರೆ. ‘ಶ್ರೀರಾಮರತ್ನ ಪ್ರೊಡಕ್ಷನ್ಸ್’ ಬ್ಯಾನರ್​ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಲಿಂಗರಾಜು ಕೆ.ಎನ್., ಪ್ರಭು ಚಿಕ್ಕನಾಯ್ಕನಹಳ್ಳಿ, ನೀರಜ್ ಗೌಡ ಹಾಗೂ ಧರ್ಮಣ್ಣ ಕಡೂರು ಅವರು ಒಟ್ಟಾಗಿ ಸೇರಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಒಂದಷ್ಟು ಕಾರಣಗಳಿಂದಾಗಿ ಧರ್ಮಣ್ಣ ಅವರ ಅಭಿಮಾನಿಗಳ ಬಳಗದಲ್ಲಿ ಈ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ.

ಮೊದಲ ಬಾರಿ ಹೀರೋ ಆಗಿ ನಟಿಸಿದ ಸಿನಿಮಾ ಎಂಬ ಕಾರಣಕ್ಕೆ ಧರ್ಮಣ್ಣ ಅವರ ಪಾಲಿಗೆ ‘ರಾಜಯೋಗ’ ಚಿತ್ರ ಸ್ಪೆಷಲ್​ ಆಗಿದೆ. ಅಕ್ಷಯ್ ರಿಷಭ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುಪ್ರಸಾದ್ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಬಿ.ಎಸ್. ಕೆಂಪರಾಜು ಅವರು ಸಂಕಲನ ಮಾಡಿದ್ದಾರೆ. ಕೃಷ್ಣ ಮೂರ್ತಿ ಕವುತಾರ್, ನಾಗೇಂದ್ರ ಶಾ, ಶ್ರೀನಿವಾಸ ಗೌಡ, ಮಹಾಂತೇಶ ಹಿರೇಮಠ್, ಉಷಾ ರವಿಶಂಕರ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

‘ರಾಜಯೋಗ’ ಚಿತ್ರದಲ್ಲಿ ಧರ್ಮಣ್ಣ ಅವರಿಗೆ ಜೋಡಿಯಾಗಿ ನಟಿ ನಿರೀಕ್ಷಾ ರಾವ್ ಅವರು ಅಭಿನಯಿಸಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ಟ್ರೇಲರ್​ ನಲ್ಲಿ ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡಲಾಗಿತ್ತು. ಕೆ.ಎ.ಎಸ್. ಎಕ್ಸಾಂ ಬರೆಯಲು ಹೊರಟ ಕಥಾನಾಯಕ ಕಡೆಗೂ ಪರೀಕ್ಷೆ ಬರೆಯುತ್ತಾನೋ ಅಥವಾ ಇಲ್ಲವೋ ಎಂಬುದು ಈ ಸಿನಿಮಾದ ಕಹಾನಿ. ‘ನಿನ್ನೆ ಮತ್ತು ನಾಳೆಯ ಬಗ್ಗೆ ಯೋಚನೆ ಮಾಡದೇ, ಇಂದಿನ ಬದುಕಿನ ಮೇಲೆ ಗಮನ ಹರಿಸಬೇಕು. ಆಗ ಜೀವನ ಚೆನ್ನಾಗಿ ಇರುತ್ತದೆ’ ಎಂಬ ಸಂದೇಶವನ್ನು ಈ ಚಿತ್ರ ಒಳಗೊಂಡಿದೆ.