ಮನೆ ಸ್ಥಳೀಯ ಕುಮಾರಸ್ವಾಮಿ ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಕುಮಾರಸ್ವಾಮಿ ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

0

ಮೈಸೂರು: ಕುಮಾರಸ್ವಾಮಿ ಹೊಟ್ಟೆಕಿಚ್ಚಿನಿಂದ, ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮಗೆ ರಾಜಕೀಯದಲ್ಲಿ ದ್ವೇಷ ಗೊತ್ತಿಲ್ಲ. ನಾವು ಯಾರಾದರೂ ತಪ್ಪು ಮಾಡಿದ್ದರೆ ಅದನ್ನ ಒಪ್ಪುವುದಿಲ್ಲ. ಹಾಗಂತ ದ್ವೇಷದ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ನನ್ನ ಮಗನ ವಿಚಾರದಲ್ಲಿ ನಿನ್ನೆ ಸುಮ್ಮನೆ ಸುಳ್ಳು ಹಬ್ಬಿಸಿದ್ದರು. ನನ್ನ ಮಗ ನನಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾನೆ. ಈಗ ನನ್ನ ಪರವಾಗಿ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತಿದ್ದಾನೆ. ಜನರ ಕೆಲಸ ಮಾಡುವುದು ತಪ್ಪಾ‌. ಕೆಡಿಪಿ ಸದಸ್ಯನಾಗಿರುವ ಕಾರಣ ಕೆಲವು ವಿಚಾರಗಳ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದಾನೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಹೇಳುವುದೆಲ್ಲಾ ಸುಳ್ಳು. ಕುಮಾರಸ್ವಾಮಿ ಇವತ್ತಿನವರೆಗೆ ಯಾವುದಾದರೂ ಸತ್ಯ ಹೇಳಿದ್ದರೆ ತೋರಿಸಿ. ಸುಳ್ಳೆ ಕುಮಾರಸ್ವಾಮಿ ಮನೆದೇವರು. ಒಂದೇ ಒಂದು ವಿಚಾರದಲ್ಲಿ ಸತ್ಯ ಹೇಳಿದ್ದಾರಾ ಹೇಳಿ. ಕುಮಾರಸ್ವಾಮಿ ಬರೀ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮೋದಿಗೆ ನನ್ನ ಕಂಡರೆ ಭಯ. ಹೀಗಾಗಿಯೇ ಪಂಚ ರಾಜ್ಯ ಚುನಾವಣೆಯಲ್ಲಿ ನಮ್ಮ ಬಗ್ಗೆ ಮಾತನಾಡುತ್ತಾರೆ. ಗ್ಯಾರಂಟಿಗಳ ಟೀಕಿಸಿದ ಮೋದಿ ಈಗ ಅದೇ ಗ್ಯಾರಂಟಿಗಳನ್ನೇ ಬೇರೆ ಕಡೆ ಘೋಷಣೆ ಮಾಡುತ್ತಿರುವ ಅರ್ಥ ಏನು? ರಾಜ್ಯದಲ್ಲಿ 40% ಸರ್ಕಾರ ಎಂದು ಕರೆಯುತ್ತಿದ್ದು ಯಾರನ್ನು? ನಮ್ಮನ್ನೇನು ಆ ರೀತಿ ಕರೆಯುತ್ತಿಲ್ಲ. ಈ ಸತ್ಯ ಗೊತ್ತಿದ್ದರು ಸುಮ್ಮನೆ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದರು.

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಮತದಾನ ನಡೆಯುತ್ತಿದೆ.  ತೆಲಂಗಾಣ, ಮಧ್ಯಪ್ರದೇಶ್, ಛತ್ತೀಸ್‌ಗಡ, ರಾಜ್ಯಸ್ಥಾನ ಎಲ್ಲ ಕಡೆ ಕಾಂಗ್ರೆಸ್ ಗೆಲ್ಲುತ್ತದೆ. ಈ ಚುನಾವಣೆಯ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ಈಗ ನವೆಂಬರ್‌ನಲ್ಲಿ ಇದ್ದೇವೆ. ಲೋಕಸಭೆ ಚುನಾವಣೆಗೆ ಮಾರ್ಚ್ ಕೊನೆಯಲ್ಲಿ ನೋಟಿಫಿಕೇಷನ್ ಆಗಲಿದೆ ಎಂದರು.

ರಾಮಮಂದಿರ ಹೊಸ ವಿಚಾರವಲ್ಲ. ರಾಮಮಂದಿರಕ್ಕೆ ನಮ್ಮ ವಿರೋಧ ಇಲ್ಲ.  ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಿದೆ. ಅದರಂತೆ ದೇವಾಲಯ ನಿರ್ಮಾಣವಾಗುತ್ತಿದೆ. ರಾಮ ಮಂದಿರದಿಂದ ಮತದಾರರು ಬದಲಾಗುತ್ತಾರೆ ಎನ್ನುವುದು ತಪ್ಪು. ದೇಶದ ಜನ ವಿವಿಧತೆಯಲ್ಲಿ ಏಕತೆ ಬಯಸುತ್ತಾರೆ. ಬ್ರಿಟೀಷರು, ಮೊಘಲರ ದಾಳಿಯ ನಂತರವೂ ದೇಶ ಒಂದಾಗಿದೆ. ಬೇರೆ ಬೇರೆ ದೇಶ, ಭಾಷೆ ಇದ್ದರೂ ಒಗ್ಗಟ್ಟಿದೆ. ನಾವು ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇಟ್ಟುಕೊಂಡವರು ಎಂದು‌ ಸಿಎಂ ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್ – ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಕರೆತರುವ ವಿಚಾರಕ್ಕೆ ಮಾತನಾಡಿ, ಮಾಜಿ ಸಚಿವ ವಿ.ಸೋಮಣ್ಣ ಪಕ್ಷಕ್ಕೆ ಬಂದರೂ ಸ್ವಾಗತ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇನೆ. ಜಿ.ಟಿ ದೇವೇಗೌಡ ಹಾಗೂ‌ ಸೋಮಣ್ಣ ಪಕ್ಷಕ್ಕೆ ಆಹ್ವಾನಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.