ಮನೆ ದೇವಸ್ಥಾನ ಮಾಡಾಯಿ ಕಾವಿಲಮ್ಮ ಶ್ರೀ ಕ್ಷೇತ್ರದಲ್ಲಿ ಪ್ರಧಾನ ಉತ್ಸವಗಳು: ಭಾಗ-2

ಮಾಡಾಯಿ ಕಾವಿಲಮ್ಮ ಶ್ರೀ ಕ್ಷೇತ್ರದಲ್ಲಿ ಪ್ರಧಾನ ಉತ್ಸವಗಳು: ಭಾಗ-2

0

5. ಸಿಂಹ ಮಾಸ (ಅಗೋಸ್ತು-ಸೆಪ್ಟಂಬರ್ ತಿಂಗಳು) :-

 ಸಿಂಹ ಮಾಸದ ಒಂದು ಶುಭಮೂರ್ತದ ದಿನ ಭಗವತಿಗೆ ಮತ್ತು ಇತರ ದೇವತೆಗಳಿಗೆ ಪುತ್ತರಿಯಾಗಿದೆ. ಊರ ಭಕ್ತರು ಕ್ಷೇತ್ರಕ್ಕೆ ಒಪ್ಪಿಸಿದಂತಹ ಭತ್ತವನ್ನು ಕ್ಷೇತ್ರ ವಠಾರದಲ್ಲಿ ಕುಟ್ಟಿ ಅಕ್ಕಿ ಮತ್ತು ಅವಲಕ್ಕಿಯನ್ನು ಮಾಡುವ ಕೆಲಸವನ್ನು ಮುತ್ತೈದೆ ಸ್ತ್ರೀಯರು ನಿರ್ವಹಿಸುವುದಾಗಿದೆ. ವಿಶೇಷ ಪೂಜೆಗಳೊಂದಿಗೆ ಪುತ್ತರಿ ಕ್ರಮವು ನಡೆಯುವುದಾಗಿದೆ.

ಸಿಂಹ ಮಾಸದ ತಿರುವೋಣಂ ದಿವಸ ನೂತನ ವಸ್ತ್ರಗಳನ್ನು ಭಗವತಿ ಸಹಿತ ಎಲ್ಲಾ ದೇವತೆಗಳಿಗೂ ತೊಡಿಸಿ ಅಲಂಕರಿಸುವುದಾಗಿದೆ. ಈ ದಿನವೂ ಎಲ್ಲಾ ದೇವರುಗಳಿಗೂ ವಿಶೇಷ ಪೂಜೆಗಳು ಸಲ್ಲುತ್ತದೆ. ವಿನಾಯಕ ಚೌತಿಯನ್ನು ವಿಶೇಷ ಪೂಜೆಗಳೊಂದಿಗೆ ಆಚರಿಸಲಾಗುತ್ತದೆ.

6. ಕನ್ಯಾ ಮಾಸ (ಸಪ್ಟಂಬರ – ಅಕ್ಟೋಬರ ತಿಂಗಳು) :-

ಕನ್ಯಾ ಮಾಸದಲ್ಲಿ ಮುಂಜಾನೆ ಕ್ಷೇತ್ರದ ಭಗವತಿ ಮಂಟಪದಲ್ಲಿ ದೀಪ ಪ್ರಜ್ವಲಿಸಿ, ಮಿಳಾವ್ ವಾದ್ಯ ಬಾರಿಸಿ, ಚಾಕ್ಯಾರರು “ಚಾಕ್ಯಾರ್ಕೋತ್ತ್” ಕಲೆಯನ್ನು ನಿರ್ವಹಿಸುತ್ತಾರೆ. ಶ್ರೀರಾಮಾವತಾರದಿಂದ ಲಂಕಾದಹನ ತನಕವಿರುವ ಕಥಾಭಾಗವನ್ನು ಚಾಕ್ಯಾರ್ ಕೂತ್ತ್ ನಲ್ಲಿ  ಪ್ರದರ್ಶಿಸುವುದಾಗಿದೆ.

7.  ತುಲಾ ಮಾಸ (ಅಕ್ಟೋಬರ – ನವೆಂಬರ ತಿಂಗಳು) :-

ತುಲಾ ಮಾಸ 1 ರಿಂದ 8ರವರೆಗೆ ಬೆಳಿಗ್ಗೆ ಭಗವತಿ ಮಂಟಪದಲ್ಲಿ ದೀಪ ಪ್ರಜ್ವಲಿಸಿ, ʼಕೋಡಿಯಿಲ ಪೂಜೆʼ ನೆರವೇರುವುದಾಗಿದೆ. 8ನೇ ದಿನ ʼಕಳತ್ತಿಲರಿʼ ಪೂಜೆಯೂ ತೆಯ್ಯಾಂಬಾಡಿ ನಂಬ್ಯಾರುಗಳಿಂದ ʼವಾಯ್ಸ್ ತ್ತಿಪಾಟ್ʼ ಕ್ರಮವು ಇರುವುದಾಗಿದೆ.

8. ವೃಶ್ಚಿಕ ಮಾಸ (ನವಂಬರ-ದಶಂಬರ ತಿಂಗಳು) :-

ವೃಶ್ಚಿಕ ಸಂಕ್ರಮಣದಂದು ಭಗವತಿ ಮಂಟಪದಲ್ಲಿ ಕಳತ್ತಿಲರಿ ಪೂಜೆಯು ನೆರವೇರುವುದು. ಅಂದಿನಿಂದ ಕ್ಷೇತ್ರದಲ್ಲಿ ಮಂಡಲ ಪೂಜೆಯು ನಡೆಯುವುದಾಗಿದೆ. ಆ ದಿನಗಳಲ್ಲಿ ಬೆಳಗಿನ ಉಷಃಪೂಜೆಯು ಮುಂಜಾನೆ 5 ಗಂಟೆಯೊಳಗಾಗಿ ಜರಗುದಾಗಿದೆ. ಎಲ್ಲಾ ದಿನಗಳಲ್ಲೂ ಬೆಳಿಗ್ಗೆ ಮಂಟಪದಲ್ಲಿ ಕೊಡಿಯಿಲ ಪೂಜೆ ಮತ್ತು ಸಂಧ್ಯೆಗೆ ಭಗವತಿಯ ಸುತ್ತ ಬಲಿ ಉತ್ಸವವಿರುವುದು. ಸಂಜೆಗೆ ಎಲ್ಲಾ ದೇವರುಗಳಿಗೂ ಅಪ್ಪ ನೈವೇದ್ಯವು ವಿಶೇಷವಾಗಿರುವುದು. ವೃಶ್ಚಿಕ ಮಾಸದ ಕಾರ್ತಿಕ ನಕ್ಷತ್ರವು ಅಮ್ಮನ ಜನ್ಮದಿನವಾಗಿದೆ. ಅಂದು ಭಗವತಿಗೆ 1001 ನೇಂದ್ರ ಮತ್ತು 1001 ಕದಳಿ ಹಣ್ಣುಗಳನ್ನು ನಿವೇದಿಸಲಾಗುತ್ತದೆ.

9. ಧನು ಮಾಸ (ದಶಂಬರ-ಜನವರಿ ತಿಂಗಳ) :-

ಧನುಮಾಸದ ಎಲ್ಲಾ ದಿನಗಳಲ್ಲೂ ಮುಂಜಾನೆ ವಿಶೇಷವಾದ ಧನು ಪೂಜೆ ಇರುವುದು. ಈ ಪೂಜೆಗೆ ʼತಿರುವಾತಿರ ಪೂಜೆʼ ಎಂದು ಹೆಸರು.

10. ಮಕರ ಮಾಸ (ಜನವರಿ-ಫೆಬ್ರವರಿ ತಿಂಗಳು) :-

ಮಕರ ಸಂಕ್ರಮಣದಿಂದ 13 ದಿನಗಳು ಭಗವತಿಯ ʼಕಲ್ಯಾಣ ಪಾಟ್ಟ್ʼ ಉತ್ಸವವಾಗಿದೆ. ಈ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಧ್ಯೆಗೆ ವಾದ್ಯಘೋಷದಿಂದ ವಿಶೇಷ ಪೂಜೆಯನ್ನು ಜರಗಿಸಲಾಗುತ್ತದೆ. ಸಂಧ್ಯೆಗೆ ಭಗವತಿಯ ʼಸ್ವರ್ಣ ನಾಂದಕಂʼ ತಿರುವಾಯುಧದ ಸುತ್ತು ಬಲಿ ಪ್ರದಕ್ಷಿಣೆಯು ಇರುವುದು. 13ನೇ ದಿನ ಬೆಳಗ್ಗೆ 10 ಗಂಟೆಗೆ ಮತ್ತು ಸಂಧ್ಯೆಗೆ ಮಂಟಪದಲ್ಲಿ ʼಕಳತ್ತಿಲರಿ ಪೂಜೆʼಯು ಇರುವುದು.

11. ಕುಂಭ ಮಾಸ (ಫೆಬ್ರವರಿ-ಮಾರ್ಚ್ ತಿಂಗಳು) :-

ಕುಂಭಮಾಸದ ಶಿವರಾತ್ರಿಯಂದು ಮಹಾದೇವನಿಗೆ ಮತ್ತು ಇತರ ಎಲ್ಲಾ ದೇವತೆಗಳಿಗೂ ವಿಶೇಷ ಪೂಜೆಯು ಜರುಗುವುದು. ಸಂಧ್ಯೆಯು ಶಿವ ಪೂಜೆಯು ಪ್ರಾಧಾನ್ಯವಾದುದಾಗಿದೆ.

12. ಮೀನ ಮಾಸ (ಮಾರ್ಚ್-ಏಪ್ರಿಲ್ ತಿಂಗಳು) :-

ಶ್ರೀ ಕ್ಷೇತ್ರದಲ್ಲಿ ಮೀನಮಾಸದ ಕಾರ್ತಿಕ ನಕ್ಷತ್ರದಿಂದ ಪೂರ್ವಾಷಾಡ ನಕ್ಷತ್ರದವರೆಗೆ 9 ದಿನಗಳಲ್ಲಿ ʼಪುರೋತ್ಸವʼ ನಡೆಯುತ್ತದೆ. ಈ ಉತ್ಸವವು ಮಾಡಾಯಿಕಾವಿಲಮ್ಮನ ಪ್ರಧಾನವಾದ ಮಹೋತ್ಸವವಾಗಿದೆ. ಈ ಉತ್ಸವವನ್ನು ಕಾಣಲು ದೂರ ದೂರದ ಊರುಗಳಿಂದ ಸಾವಿರಾರು ಸ್ತ್ರೀ ಪುರುಷರು ಆಗಮಿಸುತ್ತಾರೆ.