ಮನೆ ಮನರಂಜನೆ “ಬೆಂಬಿಡದ ನಾವಿಕ’ ಚಿತ್ರ ವಿಮರ್ಶೆ

“ಬೆಂಬಿಡದ ನಾವಿಕ’ ಚಿತ್ರ ವಿಮರ್ಶೆ

0

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಇಂಟರ್‌ನೆಟ್‌ನಿಂದ ಉಪಯೋಗ ಪಡೆದುಕೊಳ್ಳುವವರು ಒಂದೆಡೆಯಾದರೆ, ಅದನ್ನು ದುರುಪಯೋಗ ಪಡಿಸಿಕೊಳ್ಳುವವರು ಮತ್ತೂಂದೆಡೆ. ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಇಂಟರ್‌ನೆಟ್‌ ಮತ್ತು ಸಾಮಾಜಿಕ ಜಾಲತಾಣಗಳಿಗೆ ಎಷ್ಟು ಮಹತ್ವ ಕೊಡಬೇಕು ಎಂಬುದನ್ನು ತೆರೆಮೇಲೆ ಹೇಳಿರುವ ಸಿನಿಮಾವೇ ಈ ವಾರ ತೆರೆಗೆ ಬಂದಿರುವ “ಬೆಂಬಿಡದ ನಾವಿಕ’

ಸೋಶಿಯಲ್‌ ಮೀಡಿಯಾದಲ್ಲಿ “ಇನ್‌ ಫ್ಲುಯೆನ್ಸರ್‌’ ಆಗಿ ಗುರುತಿಸಿಕೊಂಡಿರುವ ಮಹತ್ವಕಾಂಕ್ಷಿ ಆರ್ಯನ್‌ಗೆ ಇಂಟರ್ನೆಟ್‌ ಮೂಲಕ ಬರುವ ಒಂದಷ್ಟು ಸಂಕಷ್ಟಗಳು ಎದುರಾಗುತ್ತವೆ. ನೋಡುತ್ತಿದ್ದಂತೆ ಆ ಹುಡುಗನ ಜೀವನ ಬದಲಾಗುತ್ತದೆ. ಸಂಕಷ್ಟದಲ್ಲಿ ಮುಳುಗುತ್ತಿರುವ ಆರ್ಯನ್‌ಗೆ ಎದುರಾಗುವ ಸನ್ನಿವೇಶವೊಂದು ಆತನನ್ನು ಮತ್ತೆ ಪುಟಿದೇಳುವಂತೆ ಮಾಡುತ್ತದೆ. ಅದು ಹೇಗೆ ಎಂಬುದೇ “ಬೆಂಬಿಡದ ನಾವಿಕ’ ಸಿನಿಮಾದ ಕಥಾಹಂದರ.

 “ಬೆಂಬಿಡದ ನಾವಿಕ’ ಸಿನಿಮಾದಲ್ಲಿ ಆಗಾಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುವ ಸೈಬರ್‌ ಕ್ರೈಂ ವಿಷಯವನ್ನು ಇಟ್ಟುಕೊಂಡು ಅದನ್ನು ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ತೆರೆಮೇಲೆ ತರಲಾಗಿದೆ. ಪ್ರಸ್ತುತ ವಿಷಯವನ್ನು ಇಟ್ಟುಕೊಂಡಿರುವ “ಬೆಂಬಿಡದ ನಾವಿಕ’ ಚಿತ್ರದ ಎಳೆ ಚೆನ್ನಾಗಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವುದರಲ್ಲಿ ಚಿತ್ರತಂಡ ಕೊಂಚ ಹಿಂದೆ ಬಿದ್ದಂತೆ ಕಾಣುತ್ತದೆ. ಚಿತ್ರಕಥೆ, ನಿರೂಪಣೆ ಮತ್ತು ಸಿನಿಮಾಕ್ಕೆ ಇನ್ನಷ್ಟು ವೇಗ ಸಿಕ್ಕಿದ್ದರೆ, “ಬೆಂಬಿಡದ ನಾವಿಕ’ ಇನ್ನೂ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು.

ಇನ್ನು ನವ ಪ್ರತಿಭೆಗಳಾದ ಶ್ರೀಯಾನ್‌, ಐಶ್ವರ್ಯಾ, ಪ್ರಿಯದರ್ಶಿನಿ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ದಿನೇಶ್‌ ಮಂಗಳೂರು, ಬಲರಾಜವಾಡಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಿನಿಮಾದ ಒಂದೆರಡು ಹಾಡುಗಳು ಗುನುಗುವಂತಿದ್ದು, ಹಿನ್ನೆಲೆ ಸಂಗೀತ ಸಿನಿಮಾದ ಮತ್ತೂಂದು ಪ್ಲಸ್‌. ಕೆಲ ಸಣ್ಣ-ಪುಟ್ಟ ಲೋಪಗಳನ್ನು ಬದಿಗಿಟ್ಟು ಹೇಳುವುದಾದರೆ, “ಬೆಂಬಿಡದ ನಾವಿಕ’ ಒಮ್ಮೆ ನೋಡಿ ಹೊಸಬರ ಬೆನ್ನುತಟ್ಟಬಹುದು.