ಮನೆ ರಾಜ್ಯ ಹೆಚ್​ ಡಿ ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರುತ್ತಾರೋ ಇಲ್ಲವೋ ಎಂಬುದೇ ಅನುಮಾನ: ಸಿಎಂ...

ಹೆಚ್​ ಡಿ ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರುತ್ತಾರೋ ಇಲ್ಲವೋ ಎಂಬುದೇ ಅನುಮಾನ: ಸಿಎಂ ಇಬ್ರಾಹಿಂ

0

ಬೆಂಗಳೂರು: ಹೆಚ್​ ಡಿ ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರುತ್ತಾರೋ ಇಲ್ಲವೋ ಎಂಬುದೇ ಅನುಮಾನವಿದೆ  ಎಂದು ಸಿಎಂ ಇಬ್ರಾಹಿಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಪಕ್ಷದಿಂದ ಅಮಾನತುಗೊಂಡ ಬಳಿಕ ಆ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ​​ಅವರು, ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷನೇ. ದೇವೇಗೌಡರೇ ರಾಷ್ಟ್ರಾಧ್ಯಕ್ಷರಾಗಿ ಇರ್ತಾರಾ ಇಲ್ಲವೋ ಎಂಬ ಅನುಮಾನವಿದೆ. ಆ ಬಗ್ಗೆ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಣಿ ನಿರ್ಧಾರ ಕೈಗೊಂಡರೆ ಏನು ಮಾಡುತ್ತಾರೆ? ಒಬ್ಬ ವ್ಯಕ್ತಿ ತೆಗೆಯುತ್ತಿಲ್ಲ. ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮಾಡಿ ಸ್ಥಾನದಿಂದ ತೆಗೆದುಹಾಕಿದರೆ ಏನು ಮಾಡುತ್ತೀರಿ? ಮಗನಿಗಾಗಿ ಈ ತರ ಮಾಡಿದ್ರೆ ಏನು ಮಾಡ್ತೀರಾ? ಈಗಲೂ ಮನವಿ ಮಾಡುತ್ತೇವೆ, ನಿರ್ಣಯವನ್ನು ವಾಪಸ್ ಪಡೆಯಿರಿ ಎಂದು ಇಬ್ರಾಹಿಂ ಅವರು ದೇವೇಗೌಡರನ್ನು ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಡಿದ್ದು ಮೊದಲ ತಪ್ಪು. ಅಮಾನತು ಮಾಡಲು ನನಗೆ ನೋಟಿಸ್ ಕೊಟ್ಟಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.

ಅಮಾನತು ಮಾಡುವ ಬಗ್ಗೆ ನನಗೆ ನೋಟಿಸ್ ಕೊಟ್ಟಿಲ್ಲ. ನಾನೇನು ಅವರ ಮನೆ ಕೆಲಸದವನಾ? ಏನು ಇವರ ಹುಚ್ಚಾಟ? ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಎಲ್ಲೋ ರೆಸಾರ್ಟ್’ನಲ್ಲಿ 8ರಿಂದ 10 ಜನ ಸಭೆ ಮಾಡುವುದಲ್ಲ. ನ್ಯಾಷನಲ್ ಕೌನ್ಸಿಲ್ ಮೆಂಬರ್ ​​ನಲ್ಲಿ 26 ಜನ ಇವರ ಮನೆಯವರೇ ಇದ್ದಾರೆ ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ಇಬ್ರಾಹಿಂ ಕಿಡಿ ಕಾರಿದ್ದಾರೆ.

ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ಸಿಎಂ ಇಬ್ರಾಹಿಂ ಅವರನ್ನು ಶುಕ್ರವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್​​ ಡಿ ದೇವೇಗೌಡ ಅಮಾನತುಗೊಳಿಸಿದ್ದರು. ಸಿಎಂ ಇಬ್ರಾಹಿಂ ಅವರು ಸಾರ್ವಜನಿಕವಾಗಿ ಪಕ್ಷದ ರಾಷ್ಟ್ರಧ್ಯಕ್ಷರ, ರಾಜ್ಯ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಹಾಗೂ ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಬಗ್ಗೆ (ಒಮ್ಮತವಾದ ನಿರ್ಣಯವಾಗಿದ್ದರೂ) ಬಹಿರಂಗವಾಗಿ ಪಕ್ಷ ವಿರೋಧಿ ಹೇಳಿಕೆ ನೀಡಿ, ಪಕ್ಷದ ಹಿತಕ್ಕೆ ಧಕ್ಕೆ ತಂದಿರುತ್ತಾರೆ. ಇಂತಹ ನಡವಳಿಕೆ ಮತ್ತು, ಹೇಳಿಕೆಗಳು ಪಕ್ಷದ ವಿರೋಧಿ ಚಟುವಟಿಕೆಗಳಾಗಿರುತ್ತವೆ. ಹೀಗಾಗಿ ಜೆಡಿಎಸ್ ಸಂವಿಧಾನ ಮತ್ತು ನಿಯಮಾವಳಿಗಳ ಅಡಿಯಲ್ಲಿ ಸಿಎಂ ಇಬ್ರಾಹಿಂ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ ಎಂದು ದೇವೇಗೌಡರು ಆದೇಶದಲ್ಲಿ ತಿಳಿಸಿದ್ದರು. ಇಷ್ಟೇ ಅಲ್ಲದೆ, ರಾಜ್ಯಾಧ್ಯಕ್ಷರನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ವಿಸರ್ಜಿಸಿದ್ದರು.

ಹಿಂದಿನ ಲೇಖನಬೈಕ್‌ ಗೆ ಖಾಸಗಿ ಬಸ್ ಡಿಕ್ಕಿ: ಬೆಮೆಲ್ ಹಿರಿಯ ಅಧಿಕಾರಿ ಸಾವು
ಮುಂದಿನ ಲೇಖನ“ಬೆಂಬಿಡದ ನಾವಿಕ’ ಚಿತ್ರ ವಿಮರ್ಶೆ