ಮದ್ದೂರು:ತಾಲ್ಲೂಕಿನ ಕೊಪ್ಪದ ಕಾಲುವೆ ರಸ್ತೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಖಾಸಗಿ ಕ್ಲಿನಿಕ್‌ಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ರವೀಂದ್ರ ಅವರ ನೇತೃತ್ವದ ತಂಡ,ಕ್ಲಿನಿಕ್ ಗೆ ಬೀಗಮುದ್ರೆ ಹಾಕಿ,ಬಂದ್ ಮಾಡಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸೂಚನೆ ಮೇರೆಗೆ ಕೊಪ್ಪದ ವೆಂಕಟೇಶ್ವರ ಕ್ಲಿನಿಕ್‌ಗೆ ಭೇಟಿ ನೀಡಿದಾಗ,ಅಲ್ಲಿ ಉತ್ತರ ಪ್ರದೇಶ ಮೂಲದ ಡಾ.ಧೀರಜ್ ಕುಮಾರ್ (ಬಿ.ಎ.ಎಂ.ಎಸ್) ಎಂಬ ವ್ಯಕ್ತಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈತ ರೋಗಿಗಳನ್ನು ತಪಾಸಣೆ ಮಾಡಿ, ಚಿಕಿತ್ಸೆ ನೀಡುತ್ತಿರುವುದು, ರೋಗಿಗಳಿಗೆ ಐ.ವಿ ಡ್ರಿಪ್,ಇಂಜೆಕ್ಷನ್ ನೀಡುತ್ತಿರುವುದು, ಸಲಹಾ ಚೀಟಿಯ ಪ್ಯಾಡ್ ಗಳನ್ನು ಬಳಸುತ್ತಿರುವುದು ಕಂಡು ಬಂದಿದೆ.
ಕ್ಲಿನಿಕ್ ನೊಂದಣಿ ಸಂಬಂಧದ ಅರ್ಹತಾ ಮಾನದಂಡಗಳ ಪ್ರತಿಗಳನ್ನು ಹಾಜರು ಪಡಿಸಲು ತಿಳಿಸಿದಾಗ, ಅದನ್ನು ಹಾಜರುಪಡಿಸಲು ವಿಫಲರಾಗಿದ್ದಾರೆ. ನೋಂದಣಿಗಾಗಿ ಕ್ಲಿನಿಕ್ ನೋಂದಣಿ ಪ್ರಾಧಿಕಾರಕ್ಕೂ ಅರ್ಜಿ ಸಲ್ಲಿಸಿಲ್ಲ, ಅಲ್ಲದೇ .ಧೀರಜ್ ಕುಮಾರ್ ಬಿ.ಎ.ಎಂ.ಎಸ್ ಡಿಗ್ರಿ ಸರ್ಟಿಫಿಕೇಟ್ ಅನ್ನು ಕೂಡ ಹಾಜರುಪಡಿಸಿಲ್ಲ, ಅಲ್ಲದೇ ಬಯೋ ಮೆಡಿಕಲ್ ವೇಸ್ಟ್ ಅನ್ನು ವಿಲೇವಾರಿ ಮಾಡುವ ಬಗ್ಗೆ ಆತನ ಬಳಿ ಮಾಹಿತಿ ಇಲ್ಲ ಎಂಬುದು ತಿಳಿದು ಬಂದಿದೆ.
ಆದ್ದರಿಂದ ಲೈಸೆನ್ಸ್ ಪಡೆಯವರೆಗೂ ಕ್ಲಿನಿಕ್ ಮುಚ್ಚುವಂತೆ ಸೂಚಿಸಲಾಗಿದೆ, ಈ ವಿಚಾರವನ್ನು ಸ್ಥಳೀಯ ಗ್ರಾ.ಪಂ. ಪಿ.ಡಿ.ಓ ಮತ್ತು ಕಾರ್ಯದರ್ಶಿಗಳಿಗೆ ತಿಳಿಸಲು ಗ್ರಾ.ಪಂ.ಗೆ ತೆರಳಿದಾಗ, ಅವರು ಹಿರಿಯ ಅಧಿಕಾರಿಗಳ ಸಭೆಗೆ ತೆರೆಳಿದ್ದರಿಂದ ಸಂದರ್ಶಕರ ವಹಿ ಪುಸ್ತಕದಲ್ಲಿ ನಮೂದಿಸಲಾಯಿತು ಎಂದು ಮದ್ದೂರು ತಾಲ್ಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿಗಳು, ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ನಿರೀಕ್ಷಾಣಾಧಿಕಾರಿಗಳು ಹಾಜರಿದ್ದರು.