ಮನೆ ರಾಜಕೀಯ ಬಿಜೆಪಿ ಪಶ್ಚಾತ್ತಾಪಪಡುವ ದಿನ ಖಂಡಿತ ಬರಲಿದೆ: ರಾಮನಾಥ ರೈ

ಬಿಜೆಪಿ ಪಶ್ಚಾತ್ತಾಪಪಡುವ ದಿನ ಖಂಡಿತ ಬರಲಿದೆ: ರಾಮನಾಥ ರೈ

0

ಮಂಗಳೂರು: ಬಿಜೆಪಿ  ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಬಿಜೆಪಿ ಪಶ್ಚಾತ್ತಾಪ ಪಡುವ ದಿನ ಖಂಡಿತಾ ಬರಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಧರ್ಮ, ದೇವರು ದೇಶ ಪ್ರೇಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಮತ ಯಾಚಿಸುವ ಬಿಜೆಪಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಸಾಮರಸ್ಯ ಕದಡುತ್ತಿರುವವರಿಗೆ ಜನ ಪಾಠ ಕಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಯಾವತ್ತೂ ಸಾಮಾಜಿಕ ಸಾಮರಸ್ಯ ಹಾಗೂ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡಿದೆ. ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಮಾಡಿದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯವನ್ನಷ್ಟೆ ಪ್ರಸಕ್ತ ರಾಜ್ಯ ಸರಕಾರ ಮಾಡುತ್ತಿದೆ. ಜಿಲ್ಲೆಯಲ್ಲಿ ಪಶ್ಚಿಮವಾಹಿನಿ, ಅಂಬೇಡ್ಕರ್ ಭವನ, ಜಿಲ್ಲಾಧಿಕಾರಿ ಕಚೇರಿ, ಜಲಸಿರಿ, ತುಂಬೆ ಅಣೆಕಟ್ಟು, ಸ್ಮಾರ್ಟ್ ಸಿಟಿ ಯೋಜನೆ ಎಲ್ಲವೂ ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಆರಂಭಗೊಂಡಿರುವುದು ಎಂದು ಅವರು ಹೇಳಿದರು.
ಬಿಜೆಪಿ ಸರಕಾರದ ವೈಫಲ್ಯಗಳು ಹೆಚ್ಚುತ್ತಿದ್ದು, ಬೆಲೆ ಏರಿಕೆ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಕೇಂದ್ರ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಜನರ ಮೇಲೆ ಭಾರ ಹೊರಿಸುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣದಲ್ಲಿ ರಾಜ್ಯ ಸರಕಾರ ಕೂಡಾ ಹೊಣೆಗಾರರು ಎಂದು ಹೇಳಿಕೆ ನೀಡುತ್ತಿದೆ. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದಾಗ ಪೆಟ್ರೋಲ್ ಡೀಸೆಲ್ ದರ ಏರಿಕೆ ಬಗ್ಗೆ ಬಿಜೆಪಿಯವರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದಾಗಲೂ ರಾಜ್ಯ ಸರಕಾರ ಹೊಣೆಗಾರರು ಎಂದು ಒಂದು ಬಾರಿಯೂ ಯಾರೂ ಹೇಳಿಕೆ ನೀಡಿಲ್ಲ. ಇದೀಗ ಜನರನ್ನು ಗೊಂದಲಕ್ಕೀಡು ಮಾಡಿ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿರುವ ಸರಕಾರ ಅದರಿಂದ ತಪ್ಪಿಸಲು ಜನರ ನಡುವೆ ಕೋಮು ಭಾವನೆ ಸೃಷ್ಟಿಸಿ ಜಗಳ ಮಾಡಿಸಿ ಅದರ ಪ್ರಯೋಜನ ಪಡೆಯುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.