ಮನೆ ರಾಜ್ಯ ಬಿ.ಆರ್. ಪಾಟೀಲ ವಿಷಯಕ್ಕೆ ಸಹಮತ ವ್ಯಕ್ತಪಡಿಸಿದ ಹಿರಿಯ ಶಾಸಕ ಯಶವಂತ್ರಾಯಗೌಡ ಪಾಟೀಲ

ಬಿ.ಆರ್. ಪಾಟೀಲ ವಿಷಯಕ್ಕೆ ಸಹಮತ ವ್ಯಕ್ತಪಡಿಸಿದ ಹಿರಿಯ ಶಾಸಕ ಯಶವಂತ್ರಾಯಗೌಡ ಪಾಟೀಲ

0

ವಿಜಯಪುರ: ತಮ್ಮ ವಿರುದ್ಧದ ಆಪಾದನೆ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಪತ್ರ ಬರೆದಿದ್ದು, ಇದಕ್ಕೆ ನನ್ನ ಸಹಮತವಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಯಶವಂತ್ರಾಯಗೌಡ ಪಾಟೀಲ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿ.ಆರ್. ಪಾಟೀಲ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ವಿಷಯ ನನಗೆ ಗೊತ್ತಿಲ್ಲ. ಪಾಟೀಲ ಅವರೊಂದಿಗೆ ಸದ್ಯ ನಾನು ಮಾತನಾಡಿಲ್ಲ. ಆದರೆ ಸದನ, ಶಾಸಕಾಂಗ ಸಭೆಯಲ್ಲಿ ಬಿ‌.ಆರ್. ಪಾಟೀಲ ಅವರು ವಿಷಯ ಪ್ರಸ್ತಾಪಿಸಿದಾಗ ಅವರಿಗೆ ಬೆಂಬಲ ನೀಡಿದ್ದೆ. ಶಾಸಕಾಂಗ ಸಭೆಯಲ್ಲಿ ಹಿರಿಯ ಶಾಸಕರಾಗಿ ಅವರು ತಮ್ಮ ವಿರುದ್ಧ ಕೇಳಿಬಂದ ಆರೋಪದ‌ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಅಗ ನಾನೂ ಸೇರಿದಂತೆ ಇತರೆ ಹಲವು ಶಾಸಕರು ಬಿ.ಆರ್.ಪಾಟೀಲ ಪ್ರಸ್ತಾಪಿಸಿದ ವಿಷಯಕ್ಕೆ ಸಹಮತ ವ್ಯಕ್ತಪಡಿಸಿದ್ದರು ಎಂದು ಘಟನೆ ಹಿನ್ನೆಲೆಯ ವಿವರ ನೀಡಿದರು.

ಅಂದು ಬಿ.ಆರ್. ಪಾಟೀಲ ಮಾತನಾಡಿದ್ದ ವಿಷಯಕ್ಕೆ ಈಗಲೂ ನನ್ನ ಬೆಂಬಲ‌ವಿದೆ. ಆದರೆ ಪಕ್ಷದ ಹಿತದೃಷ್ಟಿಯಿಂದ ನಾವು ಎಲ್ಲದಕ್ಕೂ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ಬಿ.ಆರ್.ಪಾಟೀಲ ಅವರಿಗೆ ಸಲಹೆ ನೀಡಿದ ಶಾಸಕರು.

ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ.ಆರ್.ಪಾಟೀಲ ಹೇಳಿಕೆ, ಅವರ ವ್ಯಕ್ತಿಗತ ಸ್ವಾತಂತ್ರ್ಯ. ಮಾತನಾಡಲು ಅವರಿಗೆ ಹಕ್ಕಿದೆ. ಹೀಗಾಗಿ ಈ ಬಗ್ಗೆ ನಾನೇನು ಹೇಳಲಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಆರ್.ಪಾಟೀಲ ಅವರನ್ನು ಕರೆದು ಮಾತನಾಡಬಹುದು. ಶಾಸಕಾಂಗ ಸಭೆಯಲ್ಲಿ ಚರ್ಚಿಸಿದ ವಿಷಯವನ್ನು ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಚರ್ಚಿಸಲು ಸಾಧ್ಯವಿಲ್ಲ‌. ನಮ್ಮ ಯಾವುದೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ.

ಅಧಿವೇಶನದ ಸಂದರ್ಭದಲ್ಲಿ ಭೇಟಿ ಮಾಡಿ ಮಾತನಾಡುತ್ತೇನೆ ಎಂದರು.

ನನ್ನ ಕ್ಷೇತ್ರದ ಅಭಿವೃದ್ಧಿ ವಿಷಯ ಬಂದಾಗ ನಾನು ಮಾತನಾಡಿದ್ದೇನೆ. ಆಗ ಮುಖ್ಯಮಂತ್ರಿಗೇ ನನ್ನನ್ನು ಕರೆದು ಮಾತನಾಡಿದರು. ನಮ್ಮ ಭಾಗದ ಕೆರೆಗಳಿಗೆ ನೀರು‌ ತುಂಬಿಸುವ, ಕೊನೆ ಭಾಗದ ರೈತರ ಜಮೀನಿಗೆ ನೀರು ತಲುಪಿಸುವ ವಿಷಯದಲ್ಲಿ ನಾನು ಧ್ವನಿ ಎತ್ತಿದ ಮೇಲೆ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಯಶವಂತ್ರಾಯಗೌಡ ಹೇಳಿದರು.