ಬೆಂಗಳೂರು (Bengaluru)- ನಿರಾಧಾರ ಆರೋಪ ಮಾಡುವ ಬದಲು ಸಾಕ್ಷ್ಯವಿದ್ದರೆ ಬಿಡುಗಡೆ ಮಾಡಲಿ ಎಂದು ಸಚಿವ ಸಿ.ಎನ್.ಅಶ್ವಥ್ ನಾರಾಯಣ್ (C.N.Ashwath Narayan) ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರಿಗೆ ಸವಾಲು ಹಾಕಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ತಮ್ಮ ಸಹೋದರ ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪವನ್ನು ಅಶ್ವಥ್ ನಾರಾಯಣ್ ಅವರು ತಳ್ಳಿಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗಾಳಿಯಲ್ಲಿ ಗುಂಡು ಹಾರಿಸುವ KPCC ಅಧ್ಯಕ್ಷರ ಕೀಳುಮಟ್ಟದ ರಾಜಕಾರಣ ಇಂದು ನಿನ್ನೆಯದಲ್ಲ. ನಿರಾಧಾರ ಆರೋಪ ಮಾಡುವ ಬದಲು ಸಾಕ್ಷ್ಯವಿದ್ದರೆ ಬಿಡುಗಡೆ ಮಾಡಲಿ ಎಂದು ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸುವವರಿಗೆ ಮಸಿ ಬಳಿಯುವ ವಿಫಲ ಯತ್ನ ಮಾಡಬೇಡಿ ಎಂದು ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಮಾಜಿ ಸಂಸದ ಚಂದ್ರಪ್ಪ ಅವರು, ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮವಾಗಿದೆ. ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ತನಿಖೆ, ವಿಚಾರಣೆ ಮುಂದುವರಿದಿದೆ. ಮಾಗಡಿ ದರ್ಶನ್ ಗೌಡ ವಿರುದ್ಧ ಅಕ್ರಮ ಕೇಳಿಬಂದಿದೆ. ಪ್ರಭಾವಿ ಸಚಿವರ ಸಹೋದರನನ್ನ ತನಿಖೆಗೆ ಕರೆದಿದ್ದಾರೆ. ಆಗ ಪ್ರಭಾವಿ ಸಚಿವರು ಕರೆ ಮಾಡಿ ಒತ್ತಡ ಹಾಕ್ತಾರೆ. ರಾಮನಗರ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಅಟ್ಯಿಟ್ಯೂಡ್ ನೋಡಿದರೆ ಸಂಶಯ ಬರ್ತಿದೆ. ಇದರಲ್ಲಿ ನಿಮ್ಮ ಪಾತ್ರವೂ ಇರಬಹುದು. ಮಾಗಡಿಯಲ್ಲಿ ಮೂರರಿಂದ ಐದು ಜನ ರ್ಯಾಂಕ್ ಬಂದಿದ್ದಾರೆ. ಅಶ್ವಥ್ ನಾರಾಯಣ್ ಸಹೋದರ ಸತೀಶ್ ಗೆ ಲಿಂಕ್ ಇದೆ. ಮಾಗಡಿಯ ಜನ ಇದನ್ನ ಹೇಳ್ತಿದ್ದಾರೆ ಎಂದು ಉಗ್ರಪ್ಪ ಹೇಳಿದರು.
ನಾನೊಬ್ಬ ವಕೀಲ ಕೂಡ ಹೌದು. ಅಶ್ವಥ್ ನಾರಾಯಣ್ ಕಡೆಯೂ ಬೆರಳು ತೋರಿಸ್ತಿದೆ. ಗಂಡಸ್ಥನದ ಬಗ್ಗೆ ಮಾತನಾಡಿದ್ರಿ. ನಿಮಗೆ ತಾಕತ್, ಧಂ ಇದ್ದರೆ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಿ. ನೈತಿಕತೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಅಶ್ವಥ್ ನಾರಾಯಣ್ ರಾಜೀನಾಮೆಗೆ ಉಗ್ರಪ್ಪ ಒತ್ತಾಯಿಸಿದರು.