ಮೈಸೂರು: ಸಮಾಜದಲ್ಲಿನ ಅಸಮಾನತೆಗಳನ್ನು ತೊಡೆದು ಹಾಕಿ ಸಮ ಸಮಾಜವನ್ನು ನಿರ್ಮಿಸುವುದೇ, ಸಂತ ಕವಿ ಕನಕದಾಸರ ಆಶಯವಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪನವರು ತಿಳಿಸಿದರು.
ಇಂದು ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮೈಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಕನಕದಾಸರ ಜಯಂತೋತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 536ನೇ ಶ್ರೀ ಕನಕದಾಸರ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯದ ಚಳುವಳಿ ಮೂಲಕ ಸಮಾಜದ ಭಿನ್ನಾಭಿಪ್ರಾಯವನ್ನು ತೊಡೆದುಹಾಕುವಲ್ಲಿ ಹೋರಾಡಿದ ಸಂತಕವಿ ದಾಸಶ್ರೇಷ್ಠ ಕನಕದಾಸರು. ಕನ್ನಡ ಸಾಹಿತ್ಯದಲ್ಲಿಯೇ ಕೀರ್ತನೆ ಕಾವ್ಯ ಮುಂಡಿಕೆಗಳ ಮೂಲಕ ಸಾಮಾಜಿಕ ಸಂದೇಶಗಳನ್ನು ಸಾರಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. ಅವರು ನಳ ಚರಿತ್ರೆ ಸಾಹಿತ್ಯವು ಜೀವನದ ಕಷ್ಟ-ಸುಖ, ಸಮಸ್ಯೆ ಹಾಗೂ ಕೂಡುಬಾಳನ್ನು ವಿವರಿಸುತ್ತದೆ. ಹಾಗೆಯೇ ರಾಮಧಾನ್ಯ ಚರಿತೆಯು ಎರಡು ಧಾನ್ಯಗಳನ್ನ ಮುಂದಿರಿಸಿಕೊಂಡು ಸಮಾಜದಲ್ಲಿನ ಭೇದವನ್ನು ಇತರ ತಾರತಮ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ತಿಳಿಸಿದರು.
ಅಂದು ಸ್ಥಳದಿಂದ ಬಂದ ಕನಕದಾಸರು ಇಂದು ಹಿಮಾಲಯದಷ್ಟು ಎತ್ತರದಲ್ಲಿದ್ದಾರೆ. ಅದೇ ರೀತಿ ನಮ್ಮ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಮ್ಮ ಸಾಮಾಜಿಕ ಬದ್ಧತೆಯಿಂದ ಘರ್ಜಿಸುತ್ತಿದ್ದಾರೆ. ಜಾತಿ ವಿಷಯ ಬಂದಾಗ ನಾವು ಅಲ್ಲಿನ ಇಸಂ ಅನ್ನು ವಿರೋಧಿಸಬೇಕೇ ಹೊರತು ಯಾವುದೇ ಜಾತಿ ಅಥವಾ ಧರ್ಮವನ್ನಲ್ಲ. ಬಸವಾದಿ ಶರಣರಿಂದ ಸಮಾಜದ ಬದಲಾವಣೆಯ ಪ್ರಯತ್ನವಾಗಿದ್ದು, ದಾಸ ಸಾಹಿತ್ಯ ತನ್ನ ಭಕ್ತಿ ಪಂಥದ ಮೂಲಕ ಸಮಾಜದ ಬದಲಾವಣೆಗೆ ಮತ್ತಷ್ಟು ಒತ್ತು ನೀಡಿದೆ ಎಂದರು.
ಕನಕದಾಸರು 15ನೇ ಶತಮಾನದಲ್ಲಿಯೇ ನಾನು ಹೋದರೆ ಹೋದೇನು ಎಂಬ ಮಾತಿನ ಮೂಲಕ ಮನುಷ್ಯರಲ್ಲಿರುವ ನಾನತ್ವ, ಅಹಂ ದೂರಾಗಬೇಕು ಎಂಬ ಸಂದೇಶ ಸಾರಿದ್ದಾರೆ. ಈ ನೆಲ ಜಲ ಗಾಳಿ ಎಲ್ಲರಿಗೂ ಒಂದೇ ಆಗಿರುವಾಗ ನಮ್ಮಗಳ ಮಧ್ಯೆ ಭಿನ್ನಾಭಿಪ್ರಾಯ ಅವಶ್ಯಕತೆ ಇಲ್ಲ ಎಂಬ ಅಂಶದ ಜೊತೆಗೆ ಕೋಮು ಸೌಹಾರ್ದತೆಯನ್ನು ಸಾರಿದ್ದಾರೆ ಎಂದು ತಿಳಿಸಿದರು.
ಅಧಿಕಾರದಲ್ಲಿರುವವರು ಆಡಳಿತಾತ್ಮಕ ವಿಚಾರಗಳಲ್ಲಿ ಜಾತಿ ಅಥವಾ ಧರ್ಮ ತಲೆ ದೂರದಂತೆ ನೋಡಿಕೊಳ್ಳುವುದೇ ನಿಜವಾದ ಜಾತ್ಯತೀತತೆಯಾಗಿದೆ. ಕನಕ ಪೀಠವು ಸಮಾಜ ಸುಧಾರಕರ ಧಾರ್ಮಿಕ ಕೇಂದ್ರವಾಗಿ ರೂಪುಗೊಳ್ಳಬೇಕು. ದಾಸ ಸಾಹಿತ್ಯದ ಮೂಲಕ ಸಮಾಜದ ಕೊಳಕನ್ನು ತೊಳೆಯಲು ಯತ್ನಿಸಿದ ಕನಕರ ಜಯಂತಿ ಆಚರಣೆಯು ಮನುಕುಲದ ಉದ್ಧಾರಕ್ಕೆ ಶ್ರೇಯಸ್ಸು ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ತಿನ ಶಾಸಕರಾದ ಹೆಚ್ ವಿಶ್ವನಾಥ್ ರವರು ಮಾತನಾಡಿ, ಸಂವಿಧಾನ ಬರೆಯುವಾಗ ಕನಕದಾಸರು, ಪುರಂದರದಾಸರು, ಸರ್ವಜ್ಞ ಇವರೆಲ್ಲರನ್ನು ಡಾ. ಬಿ ಆರ್ ಅಂಬೇಡ್ಕರ್ ರವರು ಚೆನ್ನಾಗಿ ಓದಿಕೊಂಡಿದ್ದರು. ನಾವೆಲ್ಲರೂ ಭಾವೈಕ್ಯತೆಯ ಸಾರವನ್ನು ಮರೆತಿದ್ದೇವೆ ಆದರೆ ಭಾವೈಕ್ಯದಲ್ಲಿ ಭಕ್ತಿಯ ಸಂಗಮವೇ ಕನಕದಾಸರಾಗಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿಗಳಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಮಾತನಾಡಿ, ಕನಕದಾಸರು ಸಂಸ್ಕೃತಿಯ ಪ್ರತೀಕ, ಕನ್ನಡದ ವಿವೇಕ ಹಾಗೂ ಸಾಹಿತ್ಯ ಸೌಹಾರ್ದತೆಯ ಆಳ ಸಾಗರ ಎಂದರು.
ಕಂಬಳಿ ಹೊದ್ದ ಸಂತ ಈಗಲೂ ನಮ್ಮೊಂದಿಗೆ ಜೀವಂತ. ಶತಮಾನಗಳು ಉರುಳಿದರೂ ಕನಕರ ಚಿಂತನೆ ಸಮಾಜದಲ್ಲಿ ಪ್ರತಿಧ್ವನಿಸುತ್ತಿದೆ. ಆಧುನಿಕ ಸಮಸ್ಯೆಗಳಿಗೆ ಕನಕ ಸಾಹಿತ್ಯ ಹಾಗೂ ಬದುಕು ದಾರಿದೀಪವಾಗಿವೆ. ಸರಿ ಸಮರ್ಪಣಾ ಭಾವದ ಭಕ್ತಿ ತನು ಹಾಗೂ ಜೀವನ ಎಲ್ಲವೂ ನಿನ್ನದೇ ಎಂದು ಭಗವಂತನಿಗೆ ತನ್ನನ್ನು ಅರ್ಪಿಸಿಕೊಂಡ ಸ್ಥಿತ ಪ್ರಜ್ಞಾ ಭಾವ ವಿಶೇಷವಾದುದು ಎಂದು ತಿಳಿಸಿದರು.
ಪ್ರಸ್ತುತ ಸಮಾಜಕ್ಕೆ ವೈಚಾರಿಕತೆ ಬಹಳ ಮುಖ್ಯ. ಗಂಡು ಸಂತಾನದಿಂದಲೇ ಮೋಕ್ಷ ಪ್ರಾಪ್ತಿ ಎಂಬ ಮೌಡ್ಯತೆಯಿಂದ ಹೊರಬನ್ನಿ ಎಂಬುದನ್ನು ಆಗಿನ ಕಾಲದಲ್ಲಿಯೇ ಸಾರಿದವರು ದಾಸ ಶ್ರೇಷ್ಠ ಕನಕರು. ಈ ಜೀವನ ಬಾಲ್ಯ ಯೌವನ ಹಾಗೂ ಮುಪ್ಪುಗಳೆಂಬ ಮೂವರೆರಿದ ಬಂಡಿಯೆಂದು ಜೀವನದ ಸಾರವನ್ನು ಸರಳವಾಗಿ ವಿವರಿಸಿದ್ದರು. ನೀತಿ ಸಂಹಿತೆಯಂತಿರುವ ಅವರ ಸಾಹಿತ್ಯದ ಸಂದೇಶವನ್ನು ಅರ್ಥೈಸಿಕೊಳ್ಳುತ್ತಾ ಅದನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಡಾ. ಡಿ ತಿಮ್ಮಯ್ಯ ಮರಿತಿಬ್ಬೆಗೌಡ, ಸಿ.ಎನ್ ಮಂಜೇಗೌಡ ಹಾಗೂ ವಿಧಾನಸಭಾ ಶಾಸಕರಾದ ಟಿ.ಎಸ್ ಶ್ರೀವತ್ಸ, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆಎಂ ಗಾಯತ್ರಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ (ಆಡಳಿತ) ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಮ್ ಡಿ ಸುದರ್ಶನ್, ಕನಕದಾಸರ ಜಯಂತೋತ್ಸವ ಆಚರಣೆ ಸಮಿತಿಯ ಅಧ್ಯಕ್ಷರಾದ ಎಂ.ಕೆ ಸೋಮಶೇಖರ್, ಸದಸ್ಯರಾದ ಮರಿಗೌಡ, ಬಿ ಎಂ ರಾಘೂ, ಎಂ ಶಿವಣ್ಣ, ಬ್ಯಾಂಕ್ ಪುಟ್ಟಸ್ವಾಮಿ, ಸಿದ್ಧ ನಾಗೇಂದ್ರ, ಜೆ ಮಹದೇವಪ್ಪ, ಮಾದೇಗೌಡ ಹಾಗೂ ಚಿಕ್ಕಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.