ಮನೆ ರಾಜ್ಯ ಬೆಂಗಳೂರು ನಗರಕ್ಕೆ ಕಂಪೆನಿ ಸೆಕ್ರೇಟರೀಸ್‌ ಪ್ರಾದೇಶಿಕ ಕಚೇರಿ ಮಂಜೂರು ಮಾಡಲು ಸಚಿವೆ ನಿರ್ಮಲಾ ಸೀತಾರಾಮನ್‌ ಜೊತೆ...

ಬೆಂಗಳೂರು ನಗರಕ್ಕೆ ಕಂಪೆನಿ ಸೆಕ್ರೇಟರೀಸ್‌ ಪ್ರಾದೇಶಿಕ ಕಚೇರಿ ಮಂಜೂರು ಮಾಡಲು ಸಚಿವೆ ನಿರ್ಮಲಾ ಸೀತಾರಾಮನ್‌ ಜೊತೆ ಚರ್ಚೆ: ತೇಜಸ್ವಿ ಸೂರ್ಯ

ಅಗ್ನಿವೀರರಿಗೆ ಉಚಿತ ಶಿಕ್ಷಣ : ಎರಡು ದಿನಗಳ ಎಸ್ಐಆರ್ ಸಿ ಪ್ರಾದೇಶಿಕ ಕಾರ್ಪೋರೇಟ್ ಸಿಎಸ್ ಸಮ್ಮೇಳನದಲ್ಲಿ ಘೋಷಣೆ

0

ಬೆಂಗಳೂರು: ಕೇಂದ್ರ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪೆನಿ ಸೆಕ್ರೇಟರೀಸ್‌ ನ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರು ನಗರಕ್ಕೆ ಮಂಜೂರು ಮಾಡಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹೇಳಿದ್ದಾರೆ.

ನಗರದ ಹೋಟೆಲ್‌ ಕ್ಯಾಪಿಟಲ್‌ ನಲ್ಲಿ ಅಯೋಜಿಸಿರುವ ಎರಡು ದಿನಗಳ ಎಸ್ಐಆರ್ ಸಿ ಪ್ರಾದೇಶಿಕ ಕಾರ್ಪೋರೇಟ್ ಸಿಎಸ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಮಂದಿ ಕಂಪೆನಿ ಸೆಕ್ರೇಟರಿಗಳಿದ್ದು, ಬೆಂಗಳೂರು ನಗರಕ್ಕೆ ಪ್ರಾದೇಶಿಕ ಕಚೇರಿಯನ್ನು ಮಂಜೂರು ಮಾಡುವಂತೆ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಲಾಗುವುದು. ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಪ್ರಾದೇಶಿಕ ಕೇಂದ್ರ ಆರಂಭವಾಗಲಿದೆ ಎಂದು ಭರವಸೆ ನೀಡಿದರು. 

ಬೆಂಗಳೂರು ನಗರ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿದ್ದು, ನಗರಕ್ಕೆ ಅಗತ್ಯವಾಗಿರುವ ಮೂಲ ಸೌಕರ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹಿನ್ನೆಡೆಯಾಗುತ್ತಿದೆ. ಮುಂದಿನ ೨೫ ವರ್ಷಗಳಿಗೆ ಅನ್ವಯವಾಗುವಂತೆ ಬೆಂಗಳೂರು ನಗರದ ಬೆಳಣಿಗೆಗೆ ಪೂರಕವಾಗಿರುವ ಯೋಜನೆಗಳನ್ನು ರೂಪಿಸುವ ಪ್ರತ್ಯೇಕ ಸಂಸ್ಥೆ ಇಲ್ಲವಾಗಿದೆ. ಬಿಡಿಎ, ಬಿಎಂಆರ್‌ ಡಿಎ, ಬಿಬಿಎಂಪಿ ಸೇರಿದಂತೆ ಯಾವುದೇ ಸಂಸ್ಥೆಗಳು ಬೆಂಗಳೂರು ಅಭಿವೃದ್ದಿಗೆ ನೀಲನಕ್ಷೆ ರೂಪಿಸುತ್ತಿಲ್ಲ. ಇದರಿಂದಾಗಿ ಬೆಂಗಳೂರು ನಗರದಲ್ಲಿ ವ್ಯಾಪಕ ಸಮಸ್ಯೆಗಳು ತಲೆ ದೋರುತ್ತಿವೆ ಎಂದು ವಿಷಾದಿಸಿದರು.

ಬೆಂಗಳೂರು ನಗರದ ಸಂಚಾರಿ ವ್ಯವಸ್ಥೆ ಸುಧಾರಿಸಲು ಸೇತುವೆ, ಮೇಲ್ಸೇತುವೆ, ಸುರಂಗಗಳ ನಿರ್ಮಾಣ. ರಸ್ತೆಗಳ ಅಗಲೀಕರಣದಿಂದ ಸಾಧ್ಯವಿಲ್ಲ. ಜಗತ್ತಿನ ಬೇರೆ ಬೇರೆ ನಗರಗಳ ಅನುಭವವನ್ನು ನೋಡಿದರೆ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆಯೇ ಇದಕ್ಕೆ ಮದ್ದು. ಮುಂದಿನ ಎರಡು ವರ್ಷಗಳಲ್ಲಿ ಆಡುಗೋಡಿಯ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲಿನ ಮೂಲಕ ೪೦ ನಿಮಿಷಗಳಲ್ಲಿ ತಲುಪಬಹುದಾಗಿದೆ ಎಂದರು.

ನಾವೀಗ ಅತ್ಯುತ್ತಮ ಯುಗದಲ್ಲಿ ವಾಸವಾಗಿದ್ದು, ನೆರೆಯ ಪಾಕಿಸ್ತಾನ, ಆಫ್ಘಾನಿಸ್ತಾನ ತೀವ್ರ ಸಂಕಷ್ಟದಲ್ಲಿದೆ. ಶ್ರೀಲಂಕಾ ದಿವಾಳಿಯಾಗಿದ್ದು, ಉಕ್ರೇನ್‌, ರಷ್ಯಾದಲ್ಲಿ ೧೮ ರಿಂದ ೧೯ ವರ್ಷದ ಯುವ ಸಮೂಹಕವನ್ನು ಬಲವಂತವಾಗಿ ಯುದ್ಧ ಮಾಡಲು ದೂಡಲಾಗುತ್ತಿದೆ. ಮಧ್ಯ ಪ್ರಾಚ್ಯದಲ್ಲೂ ಸಂಘರ್ಷದ ವಾತಾವರಣವಿದ್ದು, ಆದರೆ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತವಾಗಿದೆ. ಕಳೆದ ೯ ವರ್ಷಗಳ ಹಿಂದೆ ಶೇ ೫೦ ರಷ್ಟು ಜನರಿಗೆ ಬ್ಯಾಂಕ್‌ ಖಾತೆ ಇರಲಿಲ್ಲ. ಆದರೆ ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯನ್ನು ಅತ್ಯಂತ ಸುಸಜ್ಜಿತಗೊಳಿಸಲಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾದ ಅಧ್ಯಕ್ಷ ಮನೀಶ್ ಗುಪ್ತಾ ಮಾತನಾಡಿ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ ಅಗ್ನಿವೀರರಿಗೆ ಉಚಿತವಾಗಿ ಕಂಪನಿ ಸೆಕ್ರೇಟರೀಸ್‌ ಶಿಕ್ಷಣ ನೀಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಅತಿ ಶೀಘ್ರದಲ್ಲಿ ಆರಂಭಿಸಲಾಗುವುದು. ಬೆಂಗಳೂರಿನ ಕಂಪೆನಿ ಸೆಕ್ರೇಟರೀಸ್‌ ಕಚೇರಿಯ ಎರಡನೇ ಮಹಡಿಯಲ್ಲಿ ಮಧ್ಯಸ್ಥಿಕೆ ಕೇಂದ್ರ ಆರಂಭಿಸಲಾಗುವುದು. ಇದರಿಂದ ಸಾಂಸ್ಥಿಕ ವಲಯದ ವ್ಯಾಜ್ಯಗಳ ಇತ್ಯರ್ಥಕ್ಕೆ ಅನುಕೂಲವಾಗಲಿದೆ ಎಂದರು.

ಕಂಪೆನಿ ಸೆಕ್ರೆಟರೀಸ್‌ ಆಫ್‌ ಇಂಡಿಯಾದ ಬೆಂಗಳೂರು ಚಾಪ್ಟರ್‌ ಅಧ್ಯಕ್ಷ ಪರಮೇಶ್ವರ್‌ ಭಟ್‌ ಮಾತನಾಡಿ, ಕಂಪೆನಿ ಸೆಕ್ರೆಟರಿ ಕೋರ್ಸ್ ನಲ್ಲಿ ಗಣನೀಯ ಬದಲಾವಣೆ ತರಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯ ಕ್ರಮ ಪರಿಷ್ಕರಿಸಲಾಗಿದೆ. ಶಿಕ್ಷಣದಲ್ಲಿ ಕೃತಕ ಬುದ್ದಿಮತ್ತೆ ಸೇರಿದಂತೆ ಅತ್ಯಾಧುನಿಕ ವಿಷಯಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾದ ಬೆಂಗಳೂರು ಉಪಾಧ್ಯಕ್ಷ ಪ್ರದೀಪ್‌ ಬಿ.‌ ಕುಲಕರ್ಣಿ ಮಾತನಾಡಿ, ಎರಡು ದಿನಗಳ ಸಮ್ಮೇಳನ ಅತ್ಯಂತ ವಿನೂತನವಾಗಿದ್ದು, ಕಂಪೆನಿ ಆಡಳಿತವನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಿದೆ ಎಂದು ಹೇಳಿದರು.