ಜೋಧಪುರ (Jodhpur)- ರಾಜಸ್ಥಾನದ ಜೋಧಪುರದಲ್ಲಿ ಮಂಗಳವಾರ ಸಂಭವಿಸಿದ ಕೋಮು ಗಲಭೆಗೆ ಸಂಬಂಧಿಸಿದಂತೆ ಈವರೆಗೆ 97 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೋಧಪುರದ ಉದಯ್ ಮಂದಿರ್ ಮತ್ತು ನಗೋರಿ ಗೇಟ್ ಸೇರಿದಂತೆ ಅನೇಕ ಭಾಗಗಳಲ್ಲಿ ಕರ್ಫ್ಯೂ ಮುಂದುವರಿದಿದೆ. ಅಲ್ಲದೆ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಜಲೋರಿ ಗೇಟ್ ವೃತ್ತದ ಬಳಿ ಪರಶುರಾಮ ಜಯಂತಿ ಉತ್ಸವದ ಬಾವುಟಗಳನ್ನು ಕಿತ್ತು ಈದ್ ಬಾವುಟಗಳನ್ನು ಸ್ಥಾಪಿಸುವ ವಿಚಾರವಾಗಿ ಸೋಮವಾರ ಸಂಜೆ ಭಾರಿ ವಾಗ್ವಾದ ನಡೆದು, ಅದು ಹಿಂಸಾಚಾರಕ್ಕೆ ತಿರುಗಿತ್ತು. ಕಲ್ಲು ತೂರಾಟದಲ್ಲಿ ಕನಿಷ್ಠ ಐವರು ಪೊಲೀಸರು ಸೇರಿದಂತೆ 16 ಮಂದಿಗೆ ಗಾಯಗಳಾಗಿತ್ತು. ಎರಡೂ ಗುಂಪುಗಳನ್ನು ಚೆದುರಿಸಲು ಪೊಲೀಸರು ಅಶ್ರುವಾಯುಗಳನ್ನು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು.
ಶಾಂತಿ, ಸಾಮರಸ್ಯ ಕದಡಿದ್ದಕ್ಕೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಕ್ಕೆ ಇದುವರೆಗೂ 97 ಮಂದಿಯನ್ನು ಬಂಧಿಸಲಾಗಿದೆ. 16 ಗಾಯಾಳುಗಳಲ್ಲಿ ಒಬ್ಬ ಪೊಲೀಸ್ ಸೇರಿದಂತೆ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೋಧಪುರದಲ್ಲಿ ಗಲಭೆ ನಡೆದ ಪ್ರದೇಶ ಹಾಗೂ ಅದರ ಸುತ್ತಮುತ್ತಲಿನ ಸೂಕ್ಷ್ಮ ಮತ್ತು ಮುಖ್ಯ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜೋಧಪುರ ನಗರದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೇ 4ರ ಮಧ್ಯರಾತ್ರಿವರೆಗೂ ಕರ್ಫ್ಯೂ ಇರಲಿದೆ. ಈದ್ ಹಿಂದಿನ ದಿನದ ಘರ್ಷಣೆ ಬಳಿಕ ಮಂಗಳವಾರ ಬೆಳಿಗ್ಗೆ ಈದ್ ಪ್ರಾರ್ಥನೆ ನಂತರ ಪೊಲೀಸರು ಮತ್ತು ಗುಂಪೊಂದರ ನಡುವೆ ಮತ್ತೆ ಸಂಘರ್ಷ ನಡೆದಿರುವುದು ವರದಿಯಾಗಿದೆ. ಮಾರುಕಟ್ಟೆ ಮತ್ತು ವಾಸಸ್ಥಳ ಪ್ರದೇಶಗಳಲ್ಲಿ ಇರಿಸಿದ್ದ ವಾಹನಗಳಿಗೆ ಹಾನಿಯಾಗಿವೆ.