ಮನೆ ಸುದ್ದಿ ಜಾಲ ಪ್ರಕೃತಿ ವಿಕೋಪದ ಹಾನಿ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ:  ಜಿಲ್ಲಾಧಿಕಾರಿ

ಪ್ರಕೃತಿ ವಿಕೋಪದ ಹಾನಿ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ:  ಜಿಲ್ಲಾಧಿಕಾರಿ

0

ಮೈಸೂರು: ಮಳೆಗಾಲ ಪ್ರಾರಂಭವಾಗಿದ್ದು ಪ್ರಕೃತಿ ವಿಕೋಪದಿಂದ ಆಗುವ ಹಾನಿಯನ್ನು ತಪ್ಪಿಸಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆ ಹಂತದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಅವರು ತಿಳಿಸಿದರು.
ತಮ್ಮ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಕೃತಿ ವಿಕೋಪ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು. ಸಿಡಿಲಿನಿಂದ ತಪ್ಪಿಸಿಕೊಳ್ಳಲು ಹಾಗೂ ಮುನ್ನೆಚ್ಚರಿಕೆ ಕೈಗೊಳ್ಳಲು ಪ್ರತಿಯೊಬ್ಬರು ಸಿಡಿಲು ಆಪ್‌ನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಇದರಿಂದ ಸಿಡಿಲು ಸಂಭವಿಸುವ ಮೊದಲು ಮಾಹಿತಿ ದೊರೆಯುತ್ತದೆ ಎಂದರು.
ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು ಶೇ 34 ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ. ಇದುವರೆಗೆ 45 ಸಾವಿರ ಹೆಕ್ಟೆರ್ ಬಿತ್ತನೆ ಗುರಿ ಇದ್ದು ಜಿಲ್ಲೆಯಲ್ಲಿ 53 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಡಾ.ಬಿ.ಎಸ್ ಮಂಜುನಾಥ್ ಅವರು ಮಾತನಾಡಿ ಮಳೆಗಾಲದಲ್ಲಿ ರಸ್ತೆಗಳು ಹಾಳಾಗುತ್ತಿದ್ದು ಪಿ.ಡಬ್ಲೂ.ಡಿ ಇಲಾಖೆಯವರು ದುರಸ್ಥಿ ಮಾಡಬೇಕು. ವಿದ್ಯುತ್ ಕಂಬಗಳು ಹಾನಿಯಾಗುತ್ತಿದ್ದು ಈ ಬಗ್ಗೆ ದೂರುಗಳು ಬರುತ್ತಿವೆ ಚೆಸ್ಕಾಂ ಅವರು ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲಾ ತಹಶೀಲ್ದಾರರು ತಾಲ್ಲೂಕು ಹಂತದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪ್ರಕೃತಿ ವಿಕೋಪಗಳನ್ನು ಎದುರಿಸಲು ಯೋಜನೆಯನ್ನು ರೂಪಿಸಿಕೊಳ್ಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಗಳನ್ನು ತೆರೆಯುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಡಾ. ಪೂರ್ಣಿಮಾ , ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಾದ ಚೇತನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.