ಮನೆ ರಾಜಕೀಯ ಸರ್ಕಾರದ 5ನೇ ಗ್ಯಾರಂಟಿ ‘ಯುವನಿಧಿ’ ನೋಂದಣಿಗೆ ಡಿ.26ಕ್ಕೆ ಚಾಲನೆ: ಶರಣ್ ಪ್ರಕಾಶ್ ಪಾಟೀಲ್

ಸರ್ಕಾರದ 5ನೇ ಗ್ಯಾರಂಟಿ ‘ಯುವನಿಧಿ’ ನೋಂದಣಿಗೆ ಡಿ.26ಕ್ಕೆ ಚಾಲನೆ: ಶರಣ್ ಪ್ರಕಾಶ್ ಪಾಟೀಲ್

0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ  ಕೊನೆಯದಾದ ‘ಯುವನಿಧಿ’ ನಿರುದ್ಯೋಗ ಭತ್ಯೆ ಯೋಜನೆಯ ನೋಂದಣಿಗೆ ಡಿಸೆಂಬರ್ 26ರಂದು ಚಾಲನೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಗುರುವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ನೋಂದಣಿ ಪ್ರಕ್ರಿಯೆಗೆ ಡಿಸೆಂಬರ್ 26ರಂದು ವಿಧಾನಸೌಧದಲ್ಲಿ ಸಿಎಂ, ಡಿಸಿಎಂ ಲಾಂಛನ ಅನಾವರಣ ಮಾಡಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಜನವರಿ 12 ರಂದು ವಿವೇಕಾನಂದ ಜಯಂತಿ ದಿನ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿ ಯುವ ಪದವೀಧರರು ಮತ್ತು ಡಿಪ್ಲೊಮಾ ಪದವಿ ಪಡೆದವರ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಪದವಿ, ಡಿಪ್ಲೋಮಾ ಮುಗಿಸಿ ಆರು ತಿಂಗಳಾದ ನಿರುದ್ಯೋಗಿ ಯುವಕ-ಯುವತಿಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಅರ್ಜಿದಾರರು ಕರ್ನಾಟಕದ ನಿವಾಸಿಗಳಾಗಿರಬೇಕು ಮತ್ತು 2022-23 ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದಿರಬೇಕು. ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದರು.

ಡಿಗ್ರಿ ಪಾಸ್ ಆದವರೆಗೆ 3 ಸಾವಿರ, ಡಿಪ್ಲೋಮಾ ತೇರ್ಗಡೆ ಹೊಂದಿದವರಿಗೆ 1,500 ರೂಪಾಯಿಗಳನ್ನು ಎರಡು ವರ್ಷಗಳವರೆಗೆ ನೀಡುತ್ತೇವೆ. ಎರಡು ವರ್ಷದೊಳಗೆ ಕೆಲಸ ಸಿಕ್ಕಿದ ಕೂಡಲೇ ಸರ್ಕಾರದ ಯುವನಿಧಿ ಸವಲತ್ತು ನಿಲ್ಲುತ್ತದೆ ಎಂದು ವಿವರಿಸಿದರು.

ತಪ್ಪು ಮಾಹಿತಿ ನೀಡಿ ಹಣ ಪಡೆದರೆ ಕ್ರಮ:ಯುವ ನಿಧಿ ಫಲಾನುಭವಿಗಳು ಕೆಲಸ ದೊರೆತಿದೆಯೋ ಇಲ್ಲವೋ ಎಂಬುದನ್ನು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡಬೇಕು. ಇದನ್ನು ಶೇ 100 ರಷ್ಟು ನಾವು ನೇರವಾಗಿ ಹುಡುಕಲು ಸಾಧ್ಯವಿಲ್ಲ. ಸಾಕಷ್ಟು ಚಾಲೆಂಜ್ ಇದೆ, ನೋಡೋಣ. ಕೆಲಸ ಸಿಕ್ಕಿದವರು ಯುವನಿಧಿ ಪಡೆದುಕೊಂಡರೆ, ಆ ಹಣವನ್ನು ವಾಪಸ್ ಪಡೆಯುತ್ತೇವೆ. ಅಂಥವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಹ ಎಚ್ಚರಿಕೆ ನೀಡಿದರು.

ಯುವನಿಧಿ ಯೋಜನೆಗೆ ರಾಜ್ಯದ 10 ಲಕ್ಷಕ್ಕೂ ಹೆಚ್ಚು ಪದವೀಧರರು ಅರ್ಹರಾಗಿದ್ದು, ಇದಕ್ಕೆ ಸರ್ಕಾರ ಸುಮಾರು 250 ರೂಪಾಯಿ ನಿಗದಿಪಡಿಸಿದೆ. ಮುಂದಿನ ವರ್ಷ 1,250 ಕೋಟಿ ಬಜೆಟ್ ಅವಶ್ಯಕತೆ ಇದೆ. ಪತ್ರಿ ತಿಂಗಳು 25 ರೊಳಗೆ ಅರ್ಹರು ಅರ್ಜಿ ಸಲ್ಲಿಸಲು ಅವಕಾಶ ಇದೆ. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು.