ಮನೆ ರಾಜಕೀಯ ರಾಜ್ಯದಲ್ಲಿ ಮತ್ತೆ ತಾರಕಕ್ಕೇರಿದ ಹಿಜಾಬ್ ವಿವಾದ: ಕೇಸರಿ ಶಾಲು ಧರಿಸಿ ಶಾಲೆಗೆ ಬರುವುದನ್ನು ತಡೆಯಲು ಯಾರಿಂದಲೂ...

ರಾಜ್ಯದಲ್ಲಿ ಮತ್ತೆ ತಾರಕಕ್ಕೇರಿದ ಹಿಜಾಬ್ ವಿವಾದ: ಕೇಸರಿ ಶಾಲು ಧರಿಸಿ ಶಾಲೆಗೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿಜೆಪಿ

0

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಹಿಜಾಬ್ ಮತ್ತೆ ಜಾರಿಗೆ ಬಂದರೆ ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಶಾಲೆಗೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ತಾಕತ್ತಿದ್ದರೆ ಹಿಜಾಬ್ ವಾಪಸ್ ತನ್ನಿ  ನೋಡೋಣ ಎಂದು ಹಿಂದೂ ಸಂಘಟನೆಯ ಮುಖಂಡ ಕಲ್ಲಡ್ಕ ಪ್ರಭಾಕರ್ ಸವಾಲು ಹಾಕಿದರೆ, ಹಿಜಾಬ್ ಹಿಂದೆ ತಿರುಗುವ ಸಿದ್ಧರಾಮಯ್ಯ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು, ನಮ್ಮ ಮಕ್ಕಳು ಕೇಸರಿ ಶಾಲು ಹಾಕುವುದನ್ನು ತಡೆಯಲಿ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ, ಹಿಂದೂ ಸಂಘಟನೆಗಳ ಮುಖಂಡರ ಹೇಳಿಕೆಗೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ.

ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಹಿಜಾಬ್ ವಿಚಾರದಲ್ಲಿ ನಾವು ಆದೇಶವೇ ಮಾಡಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಶೀಲನೆ ಮಾಡುತ್ತೇವೆ ಎಂಬ ಮಾತನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅದರ ಸಾಧಕ-ಬಾಧಕವನ್ನು ನೋಡಿಕೊಂಡು ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಗೊಂದಲ ಸೃಷ್ಟಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.