ಮನೆ ಅಪರಾಧ ಪಿಎಸ್ಐ ನೇಮಕಾತಿ ಹಗರಣ: ಡಿವೈಎಸ್ಪಿ, ಇನ್ಸ್ ಪೆಕ್ಟರ್ ಅಮಾನತು

ಪಿಎಸ್ಐ ನೇಮಕಾತಿ ಹಗರಣ: ಡಿವೈಎಸ್ಪಿ, ಇನ್ಸ್ ಪೆಕ್ಟರ್ ಅಮಾನತು

0

ಬೆಂಗಳೂರು(Bengaluru): ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಶಾಮೀಲಾದ ಆರೋಪದ ಮೇಲೆ ಕಲಬುರಗಿ ಬೆರಳಚ್ಚು ವಿಭಾಗದ ಡಿವೈಎಸ್‌ಪಿ ಆರ್‌.ಆರ್‌. ಹೊಸಮನಿ ಮತ್ತು ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ದಿಲೀಪ್‌ ಸಾಗರ್‌ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್‌ ಸಬ್‌ ಇನ್ಸ್​ಪೆಕ್ಟರ್‌ (ಪಿಎಸ್‌ಐ) ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ಸುದೀರ್ಘ ನಾಲ್ಕು ಗಂಟೆಗಳ ಡಿವೈಎಸ್‌ಪಿ ಆರ್‌.ಆರ್‌. ಹೊಸಮನಿ ಅವರನ್ನು ಸಿಐಡಿ ತಂಡ ವಿಚಾರಣೆ ನಡೆಸಿದ್ದು, ಮಹತ್ವದ ಅಂಶಗಳನ್ನು ಕಲೆ ಹಾಕಿರುವ ಸಾಧ್ಯತೆ ಇದೆ.

ಸಿಐಡಿ ಎಸ್​ಪಿ ರಾಘವೇಂದ್ರ ಸಮ್ಮುಖದಲ್ಲಿ ರಾಯಚೂರು ಜಿಲ್ಲೆಯ ಡಿವೈಎಸ್​ಪಿ ಅವರನ್ನು ನಿನ್ನೆ ಸಾಯಂಕಾಲ 7 ಗಂಟೆಯಿಂದ 11 ಗಂಟೆವರೆಗೆ ವಿಚಾರಣೆ ಮಾಡಲಾಯಿತು. ಈ ಪೊಲೀಸ್ ಅಧಿಕಾರಿ ಹಿಂದೆ ಆಳಂದ ಉಪವಿಭಾಗದಲ್ಲಿ ಡಿಎಸ್​ಪಿಯಾಗಿ ಕೆಲಸ ಮಾಡಿದ್ದರು. ಇವರು ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಕಿಂಗ್‌ಪಿನ್ ಆಗಿರುವ ಆರ್.ಡಿ.ಪಾಟೀಲ್ ಆಪ್ತರು ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇವರ ಪಾತ್ರ ಏನು? ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಮೂಲಗಳ ಪ್ರಕಾರ, ಕೆಲವು ಪಿಎಸ್‌ಐ ಅಭ್ಯರ್ಥಿಗಳನ್ನು ಆರ್.ಡಿ.ಪಾಟೀಲ್‌ಗೆ ಪರಿಚಯಿಸಿ ಡೀಲ್ ಕುದುರಿಸಿದ್ದರು ಎನ್ನಲಾಗುತ್ತಿದೆ. ಈ ನಡುವೆ ಬುಧವಾರ ದಿನವಿಡೀ ಕಿಂಗ್‌ಪಿನ್‌ಗಳಾಗಿರುವ ಆರ್.ಡಿ.ಪಾಟೀಲ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ಸೇರಿದಂತೆ ಇತರರನ್ನು ವಿಚಾರಣೆ ನಡೆಸಿ ಹಲವು ಮಾಹಿತಿ ಕಲೆ ಹಾಕಿಕೊಂಡಿದ್ದಾರೆ.

ಕಾನ್ಸ್ಟೇಬಲ್ ಬಂಧನ: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪ ಸಂಬಂಧ ಮತ್ತೊಬ್ಬ ಕಾನ್ಸ್​ಟೇಬಲ್​ನನ್ನು ಸಿಐಡಿ ಬಂಧಿಸಿದೆ. ಈವರೆಗೆ ಒಟ್ಟು 13 ಮಂದಿ ಆರೋಪಿಗಳನ್ನು ಸೆರೆಹಿಡಿದಂತಾಗಿದ್ದು,‌ ಈ‌ ಪೈಕಿ ಮೂವರು ಪೊಲೀಸರು ಮೋಸದ ಜಾಲದಲ್ಲಿ ಸಿಲುಕಿಕೊಂಡಂತಾಗಿದೆ‌. ಅಕ್ರಮ ಹಿನ್ನೆಲೆಯಲ್ಲಿ ಬೆಂಗಳೂರಿನ 7 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ‌ ಪಿಎಸ್ಐ ಪರೀಕ್ಷೆ ಬರೆದಿದ್ದ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.‌ ಯಶವಂತ್ ದೀಪ್ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು. ಹಲವು ವರ್ಷಗಳಿಂದ ಮಾಜಿ ಪ್ರಧಾನಿಗಳ ಭದ್ರತೆಗೆ ಯಶವಂತ್ ನಿಯೋಜನೆಗೊಂಡಿದ್ದ.‌ ಸೇವಾನಿರತ ಕೋಟಾದಡಿ 3ನೇ ರ್ಯಾಂಕ್ ಪಡೆದಿದ್ದ. ಅಕ್ರಮ ಎಸಗಿ ಪಿಎಸ್ಐ ಹುದ್ದೆಗೆ ಸೆಲೆಕ್ಟ್ ಆದ ಮಾಹಿತಿ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಸಿಐಡಿ ವಿಚಾರಣೆ ಮಾಡುತ್ತಿದೆ.