ಮನೆ ಸುದ್ದಿ ಜಾಲ ಶಾಲಾ ಬಸ್ ಚಾಲಕ, ವಿದ್ಯಾರ್ಥಿನಿ ಆತ್ಮಹತ್ಯೆ: ಜ್ಞಾನದೀಪ ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ...

ಶಾಲಾ ಬಸ್ ಚಾಲಕ, ವಿದ್ಯಾರ್ಥಿನಿ ಆತ್ಮಹತ್ಯೆ: ಜ್ಞಾನದೀಪ ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

0

ಚಿಕ್ಕಮಗಳೂರು: ಚಲಿಸುತ್ತಿದ್ದ ರೈಲಿನಡಿ ಬಿದ್ದು ಶಾಲಾ ಬಸ್​ ಚಾಲಕ ಮತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಇನ್ನು ಮೃತ ಜಾನವಿ ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಜ್ಞಾನದೀಪ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಂತೋಷ್ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

ಮೃತ ಶಾಲಾ ಬಸ್ ಚಾಲಕ ಸಂತೋಷ್ (28) ಎಂಟನೇ ತರಗತಿ ವಿದ್ಯಾರ್ಥಿನಿ ಜಾನವಿ (14)ಗೆ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನಂತೆ. ಈ ಬಗ್ಗೆ ಪೋಷಕರು ಶಾಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಆದರೂ ಸಂತೋಷ್ ವಿರುದ್ಧ ಆಡಳಿತ ಮಂಡಳಿ ಕ್ರಮ ಕೈಗೊಂಡಿರಲಿಲ್ಲ.

2023 ಡಿಸೆಂಬರ್​ 31 ರಂದು ಜಾನವಿ, ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದಳು. ಹೀಗೆ ಹೇಳಿ ಹೋದ ಜಾನವಿಯನ್ನು ಸಂತೋಷ್ ತನ್ನ ಜೊತೆ ಕರೆದೊಯ್ದಿದ್ದನು. ಇದೇ ರಾತ್ರಿ ಅಜ್ಜಂಪುರ ತಾಲೂಕಿನ ಬಂಕನಕಟ್ಟೆಯ ರೈಲ್ವೆ ಹಳಿ ಮೇಲೆ ಇಬ್ಬರ ಮೃತದೇಹ ರುಂಡ ಮತ್ತು ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಇಬ್ಬರು ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದರು. ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ​​ ದಾಖಲಾಗಿದೆ.