ಮನೆ ರಾಷ್ಟ್ರೀಯ ಲೋಕಸಭೆ ಚುನಾವಣೆ: ಜ.12ರಿಂದ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಪ್ರವಾಸ

ಲೋಕಸಭೆ ಚುನಾವಣೆ: ಜ.12ರಿಂದ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಪ್ರವಾಸ

0

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜ.12ರಿಂದ ಫೆಬ್ರವರಿ ಅಂತ್ಯದ ವರೆಗೆ ದೇಶಾದ್ಯಂತ ಪ್ರವಾಸ ನಡೆಸಿ, ಎಲ್ಲ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಕಳೆದ 9 ವರ್ಷಗಳಲ್ಲಿ ಸರಕಾರದ ಸಾಧನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ರಾಜ್ಯಗಳ ಭೇಟಿ ಸಂದರ್ಭದಲ್ಲಿ ಸಾರ್ವಜನಿಕ ರ‍್ಯಾಲಿಗಳಲ್ಲಿ ಭಾಗವಹಿಸುವ ಅವರು, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಹಾಗೂ ಕೋಟ್ಯಾಂತರ ರೂಪಾಯಿ ವೆಚ್ಚದ ಹಲವು ಮೆಗಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅವರು ಜ.12ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

13ರಂದು ಬಿಹಾರದ ಪಶ್ಚಿಮ ಚಂಪಾರಣ್‌ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ ಅಂತ್ಯದ ವೇಳೆಗೆ ತೆಲಂಗಾಣ, ಪಶ್ಚಿಮ ಬಂಗಾಲ, ಬಿಹಾರ, ಉತ್ತರ ಪ್ರದೇಶ, ತಮಿಳುನಾಡು…ಹೀಗೆ ಸರಕಾರ ರಚನೆಗೆ ಮುಖ್ಯ ಪಾತ್ರ ವಹಿಸುವ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಬಿಹಾರ, ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯ ಗಳಿಗೆ 2-3 ಬಾರಿ ಭೇಟಿ ನೀಡಲಿದ್ದಾರೆ. ಇದೇ ವೇಳೆ ಬಿಜೆಪಿಯಿಂದ ಆಯೋಜಿಸುವ ಸಾರ್ವಜನಿಕ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆಯೇ ಅಯೋಧ್ಯೆ ರಾಮ ಮಂದಿರದಲ್ಲಿ ಜ.22ರಂದು ನಡೆಯುವ ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.