ಬೆಂಗಳೂರು(Bengaluru)- ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ಸುಮುಖ್ (22) ಮತ್ತು ಲೀನಾ ನಾಯ್ಡು (19)ಎಂದು ಗುರುತಿಸಲಾಗಿದೆ. ಸುಮುಖ್ ಹೋಂಡಾ ಸಿಟಿ ಕಾರಿನಲ್ಲಿ ತನ್ನ ಸ್ನೇಹಿತೆ ಲೀನಾ ನಾಯ್ಡು ಜೊತೆ ನೈಸ್ ರಸ್ತೆಯ ಪಿಇಎಸ್ ಕಾಲೇಜು ಕಡೆಯಿಂದ ಸೋಂಪುರ ಕಡೆಗೆ ವೇಗವಾಗಿ ಬರುವಾಗ ಬಿಡಿಎ ಟೋಲ್ ಬಳಿ ಕಾರು ನಿಯಂತ್ರಣ ತಪ್ಪಿದೆ. ಈ ವೇಳೆ ಎದುರು ದಿಕ್ಕಿನ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಖಾಸಗಿ ಮಿನಿ ಬಸ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಉರುಳಿ ಬಿದ್ದ ಪರಿಣಾಮ ಚಾಲಕ ಸುಮುಖ್ ಹಾಗೂ ಲೀನಾ ನಾಯ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ವೇಳೆ ಖಾಸಗಿ ಮಿನಿ ಬಸ್ ಕೂಡ ಉರುಳಿ ಬಿದ್ದಿದ್ದು, ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ.
ಕೂಡಲೇ ಸ್ಥಳೀಯರು ಹಾಗೂ ಇತರೆ ವಾಹನಗಳ ಸವಾರರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬಸ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಕಾಲೊಂದನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಕೆಂಗೇರಿ ಸಂಚಾರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.