ಬೆಂಗಳೂರು: ರೈಲ್ವೆ ದುರಂತವಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಲ್ಲಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಜವಾಹರಲಾಲ್ ನೆಹರೂ ಅವರ ನಂತರ ದೇಶದ ಪ್ರಧಾನಿಗಳಾಗಿದ್ದವರು. ಜೈ ಜವಾನ್ ಜೈ ಕಿಸಾನ್ ಎಂದು ಕರೆ ಕೊಟ್ಟವರು. ಆಹಾರ ಸ್ವಾವಲಂಬನೆ ಆಗದಿದ್ದ ಸಂದರ್ಭದಲ್ಲಿ ಇಡೀ ದೇಶದ ಜನ ಒಂದು ದಿನದ ಉಪವಾಸ ಮಾಡಲು ಕರೆ ಕೊಟ್ಟಿದ್ದ ಅವರು ಅಲ್ಪಾವಧಿ ಪ್ರಧಾನ ಮಂತ್ರಿ ಆಗಿದ್ದರೂ ಆಹಾರ ಸ್ವಾವಲಂಬನೆಗೆ ಪ್ರಯತ್ನ ಮಾಡಿದರು ಎಂದರು.
ಪ್ರಾಮಾಣಿಕ ರಾಜಕಾರಣಿ
ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಗೆದ್ದಿದ್ದರು. ಅತ್ಯಂತ ಪ್ರಾಮಾಣಿಕ ರಾಜಕಾರಣಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರು. ಅವರ ಪುಣ್ಯತಿಥಿಯನ್ನು ಇಡೀ ದೇಶದಲ್ಲಿ ಆಚರಿಸಲಾಗುತ್ತಿದೆ. ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಗಿದೆ ಎಂದರು.