ಮನೆ ಸ್ಥಳೀಯ 15 ಲಕ್ಷ ಪ್ರವಾಸಿಗರು ವಸ್ತು ಪ್ರದರ್ಶನಕ್ಕೆ ಭೇಟಿ: ಶ್ರೀವತ್ಸ

15 ಲಕ್ಷ ಪ್ರವಾಸಿಗರು ವಸ್ತು ಪ್ರದರ್ಶನಕ್ಕೆ ಭೇಟಿ: ಶ್ರೀವತ್ಸ

0

ಮೈಸೂರು: 90 ದಿನಗಳ ದಸರಾ ವಸ್ತು ಪ್ರದರ್ಶನಕ್ಕೆ ಸುಮಾರು 15 ಲಕ್ಷ ಜನ ಭೇಟಿ ನೀಡಿದ್ದು, ದಸರಾ ವಸ್ತು ಪ್ರದರ್ಶನ ಯಶಸ್ವಿಯಾಗಿದೆ ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ ಅವರು ತಿಳಿಸಿದರು.

ಇಂದು ವಸ್ತು ಪ್ರದರ್ಶನ ಆವರಣದಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಸರಾ ವಸ್ತು ಪ್ರದರ್ಶನ ಈ ಬಾರಿ 90 ದಿನಗಳ ಕಾಲ ಯಶಸ್ವಿಯಾಗಿ ನಡೆದಿದೆ. ದಸರಾ ವಸ್ತು ಪ್ರದರ್ಶನಕ್ಕೆ ಹೆಸರು ವಾಸಿ. ಆವರಣದಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದಿದೆ. ದೇಶದ ಮೂಲೆ ಮೂಲೆಯಿಂದ ಜನರು ವಸ್ತು ಪ್ರದರ್ಶನಕ್ಕೆ ಬೇಟಿ ನೀಡಿದ್ದಾರೆ. ಇಲ್ಲಿ 90 ದಿನಗಳಿಂದ ಮಳಿಗೆ ತೆರೆದಿರುವ ಮಳಿಗೆದಾರರು ಆದಾಯವನ್ನು ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

2023 ರ ದಸರಾ ವಸ್ತು ಪ್ರದರ್ಶನದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ನಿಗಮ ಮಂಡಳಿಗಳು ಹಾಗೂ ಜಿಲ್ಲಾ ಪಂಚಾಯತ್ ಗಳಿಂದ ತೆರೆದ ಮಳಿಗೆಗಳಲ್ಲಿ ಬಹುಮಾನಕ್ಕೆ ಆಯ್ಕೆಯಾದ ಮಳಿಗೆಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಉತ್ತಮವಾಗಿ ಚಿತ್ರ ಬಿಡಿಸಿದ ಮಕ್ಕಳಿಗೆ, ವಿಶೇಷ ವಿಭಾಗದಲ್ಲಿ ಕಲಾಕೃತಿ ನಿರ್ಮಾಣ, ಪೆನ್ಸಿಲ್ ಶೇಡಿಂಗ್ ವಿಭಾಗದಲ್ಲಿ ಬಹುಮಾನ ವಿತರಣೆ,ಮಹಿಳಾ ವಿಭಾಗದ ಸಾಂಪ್ರದಾಯಿಕ ಕಲೆ, ಪ್ರಕೃತಿ ಚಿತ್ರಣ ವಿಭಾಗದಲ್ಲಿ ಉತ್ತಮ ಕಲೆ ಪ್ರದರ್ಶಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಜೇಶ್ ಗೌಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತ ರಾವ್ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.