ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದ ವಿಶಾಖಪಟ್ಟಣದ ಸಿಂಹಾಚಲಂನಲ್ಲಿ ಅತೀ ಪವಿತ್ರ ದೇವಾಲಯವಾದ ಸಿಂಹಾದ್ರಿ ಅಪ್ಪಣ್ಣಸ್ವಾಮಿ (ವರಾಹ ಲಕ್ಷ್ಮೀ ನರಸಿಂಹಸ್ವಾಮಿ) ದೇವಸ್ಥಾನದಲ್ಲಿ ನಡೆದ ಭೀಕರ ಅಪಘಾತದಲ್ಲಿ ಎಂಟು ಮಂದಿ ಭಕ್ತರು ದುರ್ಮರಣಕ್ಕೊಳಗಾಗಿದ್ದಾರೆ. ಚಂದನೋತ್ಸವಂ ಹಬ್ಬದ ಸಮಯದಲ್ಲಿ ಈ ಅವಘಡ ಸಂಭವಿಸಿದೆ.
ಪ್ರತಿ ವರ್ಷ ಏಪ್ರಿಲ್ 30 ರಂದು ನಡೆಯುವ ಈ ಹಬ್ಬದಲ್ಲಿ ಸಾವಿರಾರು ಭಕ್ತರು ದೇವರ ನಿಜರೂಪ ದರ್ಶನಕ್ಕಾಗಿ ಸಿಂಹಾಚಲಕ್ಕೆ ಬರುವ ಪರಂಪರೆ ಇದೆ. ಈ ವರ್ಷದ ಚಂದನೋತ್ಸವದ ಅಂಗವಾಗಿ, ಇಂದು ಬೆಳಿಗ್ಗೆ ಭಕ್ತರು ಸಾಲಿನಲ್ಲಿ ನಿಂತು ದರ್ಶನಕ್ಕೆ ನಿರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಇತ್ತೀಚೆಗೆ ನಿರ್ಮಿಸಲಾದ 20 ಅಡಿ ಉದ್ದದ ಹೊಸ ಗೋಡೆಯು ಕುಸಿದಿದ್ದು ಎಂಟು ಜನರ ಪ್ರಾಣಹಾನಿ ಸಂಭವಿಸಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಕಾರಣ: ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂದು ಬೆಳಗಿನ ಜಾವ 2:30 ರಿಂದ 3:30ರ ನಡುವೆ ಧಾರಾಕಾರ ಮಳೆಯಾಗಿದ್ದು, ಬಿರುಗಾಳಿ ಸಹಿತ ಭಾರೀ ವಾತಾವರಣ ಇದ್ದದ್ದು ಗೋಡೆ ಕುಸಿತಕ್ಕೆ ಕಾರಣವಾಗಿದೆ. ಗೋಡೆಯು ಮಣ್ಣಿನಿಂದ ತುಂಬಿಸಲಾದದ್ದಾಗಿದ್ದು, ಭಾರೀ ಮಳೆಯ ಕಾರಣದಿಂದ ಮಣ್ಣು ಸಡಿಲವಾಗಿ ಕುಸಿತ ಸಂಭವಿಸಿರಬಹುದು ಎನ್ನಲಾಗಿದೆ. ತೀವ್ರ ಗಾಳಿಯಿಂದ ಪೆಂಡಾಲ್ಗಳೂ ನೆಲಕ್ಕುರುಳಿದ್ದು, ಅದು ಕೂಡ ಗೊಂದಲವನ್ನು ಹೆಚ್ಚಿಸಿದೆ.
ರಕ್ಷಣಾ ಕಾರ್ಯಾಚರಣೆ: ಘಟನೆಯಾದ ತಕ್ಷಣವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿವೆ. ಅವಶೇಷಗಳಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದು ಚಿಕಿತ್ಸೆಗಾಗಿ ರವಾನಿಸಲಾಗಿದೆ. ಸ್ಥಳದಲ್ಲಿ ಇನ್ನುಮತ್ತಷ್ಟು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಅಧಿಕೃತ ಪ್ರತಿಕ್ರಿಯೆ: ರಾಜ್ಯ ಸರ್ಕಾರ, ದೇವಸ್ಥಾನ ಆಡಳಿತ ಮಂಡಳಿ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಘಟನೆಯಲ್ಲಿ ತಕ್ಷಣದ ಕ್ರಮ ಕೈಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆಯ ಸಾಧ್ಯತೆಗಳಿವೆ. ತಕ್ಷಣದ ತನಿಖೆಗೆ ಆದೇಶ ನೀಡಲಾಗಿದ್ದು, ಗೋಡೆಯ ನಿರ್ಮಾಣದ ಗುಣಮಟ್ಟ, ಸುರಕ್ಷತೆ ಕ್ರಮಗಳ ಲೋಪ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತದೆ.













