ಮನೆ ರಾಜ್ಯ ವರ್ಗಾವಣೆಗಳಲ್ಲಿ ಪಾರದರ್ಶಕತೆ ತರಲು ಕ್ರಮ: ಪಿಡಿಒ ಇತರ ನೌಕರರ ಕೌನ್ಸೆಲಿಂಗ್‌ ಮಾದರಿ ವರ್ಗಾವಣೆಗೆ ಸಿದ್ಧತೆ-  ಪ್ರಿಯಾಂಕ್‌...

ವರ್ಗಾವಣೆಗಳಲ್ಲಿ ಪಾರದರ್ಶಕತೆ ತರಲು ಕ್ರಮ: ಪಿಡಿಒ ಇತರ ನೌಕರರ ಕೌನ್ಸೆಲಿಂಗ್‌ ಮಾದರಿ ವರ್ಗಾವಣೆಗೆ ಸಿದ್ಧತೆ-  ಪ್ರಿಯಾಂಕ್‌ ಖರ್ಗೆ

0

ಬೆಂಗಳೂರು: 2024 ಜನವರಿ 20: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ತನ್ನ ನೌಕರರ ವರ್ಗಾವಣೆಗಳಿಗಾಗಿ ಮೊದಲ ಬಾರಿಗೆ ಹೊಸತನವನ್ನು ತುಂಬಿಕೊಳ್ಳಲಿದೆ.  2024-25ನೆ ಸಾಲಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇಲಾಖೆಯ ನೌಕರರನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲು ಸೇವಾ ನಿಯಮಗಳನ್ನು ರೂಪಿಸುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಖಾತೆಯನ್ನು ವಹಿಸಿಕೊಂಡ ಆರಂಭದಲ್ಲಿಯೇ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತಿ ಕಾರ್ಯದರ್ಶಿಗಳ ವರ್ಗಾವಣೆಗಳಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ ಕೌನ್ಸೆಲಿಂಗ್‌ ಪದ್ಧತಿಯನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಪೂರಕ ಚಟುವಟಿಕೆಗಳು ಆರಂಭಗೊಂಡಿದ್ದು ಈ ಸಂಬಂಧದ ಸೇವಾ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯ ಹಂತ ತಲುಪಿದೆ.

ನೌಕರರ ಹಾಗೂ ಸರ್ಕಾರದ ಹಿತದೃಷ್ಟಿಯನ್ನು ಇರಿಸಿಕೊಂಡು ಕೌನ್ಸೆಲಿಂಗ್‌ ಮಾದರಿ ವರ್ಗಾವಣೆಗಳನ್ನು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೊಳಿಸಲಾಗುವುದು, ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ನೌಕರರು ಸೇವಾಮನೋಭಾವದಿಂದ ಗ್ರಾಮೀಣ ಜನರಿಗೆ ನೆರವಾಗಬೇಕೆಂಬುದು ತಮ್ಮ ಆದ್ಯತೆಯಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.