ಮನೆ ರಾಜಕೀಯ ಶ್ರೀರಾಮ ಏನು ಬಿಜೆಪಿಯವರ ಅಪ್ಪನ ಮನೆ ಆಸ್ತಿಯಾ: ಡಿ.ಕೆ ಶಿವಕುಮಾರ್ ವಾಗ್ದಾಳಿ

ಶ್ರೀರಾಮ ಏನು ಬಿಜೆಪಿಯವರ ಅಪ್ಪನ ಮನೆ ಆಸ್ತಿಯಾ: ಡಿ.ಕೆ ಶಿವಕುಮಾರ್ ವಾಗ್ದಾಳಿ

0

ಬೆಂಗಳೂರು: ಭಗವಾನ್ ಶ್ರೀರಾಮ ಏನು ಬಿಜೆಪಿಯವರ ಅಪ್ಪನ ಮನೆ ಆಸ್ತಿಯಾ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ನನ್ನ ಹೆಸರಲ್ಲಿ ಶಿವನ ಮಗ ಕುಮಾರನೂ ಇದ್ದಾನೆ. ಬಿಜೆಪಿಯವರಿಗೆ ಹೊಟ್ಟೆ ಉರಿ ಎಂದರು.

ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ. ದೇಗುಲಗಳಲ್ಲಿ ಪೂಜೆ ಮಾಡುವಂತೆ ನಾವು ಆದೇಶ ಮಾಡಿಲ್ವಾ? ಮುಜರಾಯಿ ಇಲಾಖೆ ದೇಗುಲಗಳಿಗೆ ಆದೇಶಿಸಿಲ್ವಾ? ರಾಮನನ್ನೂ ಪೂಜಿಸುತ್ತೇವೆ, ಸೀತೆಯನ್ನೂ ಪೂಜಿಸುತ್ತೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರ ಪತನಗೊಳಿಸಿದವರ ಜೊತೆಗೆ ಸಖ್ಯ ಬೆಳೆಸಿದ್ದಾರೆ ಎಂದು ಜೆಡಿಎಸ್ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಅಕ್ಕಿಯನ್ನು ಮಂತ್ರಾಕ್ಷತೆಯಾಗಿ ಹಂಚುತ್ತಿದ್ದಾರೆ ಎಂದು ಅವರು ದೂರಿದರು.

ಕುಟುಂಬಸ್ಥರ ಸಾವು ಸಹಿಸಿಕೊಂಡು ರಾಹುಲ್ ಗಾಂಧಿ ಜೋಡೋ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಡಿಕೆ ಶಿವಕುಮಾರ್ ಹೇಳಿದರು.

ದೇಶದ ಜನರ ಹೃದಯ ಒಗ್ಗೂಡಿಸಲು ರಾಹುಲ್ ಗಾಂಧಿ ಅವರು ಜೋಡೋ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ದೇಶದ ನ್ಯಾಯಕ್ಕಾಗಿ ರಾಹುಲ್​ 2ನೇ ಹಂತದ ಯಾತ್ರೆ ಮಾಡುತ್ತಿದ್ದಾರೆ. ಇದೊಂದು ಮಾದರಿ ಹಾಗೂ ಐತಿಹಾಸಿಕವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ರಾಹುಲ್ ಗಾಂಧಿ ಅವರನ್ನು ಅಸ್ಸಾಂನ ಗುವಾಹಟಿ ನಗರಕ್ಕೆ ಪ್ರವೇಶಿಸಲು ಪೊಲೀಸರು ಬಿಡುತ್ತಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಬದುಕಿದೆಯಾ? ರಾಹುಲ್ ಗಾಂಧಿ ಪಾದಯಾತ್ರೆಯಿಂದ ಅವರಿಗೆ (ಬಿಜೆಪಿ) ಭಯ. ನಾವು ರಾಜಕಾರಣಕ್ಕೆ ಧರ್ಮವನ್ನು‌ ದುರುಪಯೋಗ ಮಾಡುತ್ತಿಲ್ಲ. ನಮ್ಮ ಹೆಸರಿನಲ್ಲಿ ದೇವರುಗಳ ನಾಮ ಇದೆ. ಯಾವುದೇ ಜಾತಿ, ಧರ್ಮ ಇರಲಿ, ಎಲ್ಲದರದ್ದೂ ತತ್ವ ಒಂದೇ. ದೇವನೊಬ್ಬ ನಾಮ ಹಲವು, ಎಲ್ಲದರಲ್ಲೂ ದೇವರನ್ನು ನೋಡ್ತೇವೆ ಎಂದು ಶಿವಕುಮಾರ್ ಹೇಳಿದರು.