ಹುಬ್ಬಳ್ಳಿ(Hubballi): ಹೋಟೆಲ್ ಗಳಲ್ಲಿ ತಿಂಡಿ ಬೆಲೆ ರೇಟ್ ಹಾಕಿದಂತೆ ಎಲ್ಲಾ ನೇಮಕಾತಿಗಳಿಗೆ ಒಂದೊಂದು ರೇಟ್ ಫಿಕ್ಸ್ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ಹುಬ್ಬಳ್ಳಿಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2,500 ಕೋಟಿ ರೂ. ರೆಡಿ ಮಾಡಿಕೊಳ್ಳಿ ಅಂತ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ, ಹಾಲಿ ಶಾಸಕ ರಾಜ್ಯದ ಜನರಿಗೆ ತಿಳಿಸಿದ್ದಾರೆ” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ರೆಡಿ ಮಾಡಿಕೊಂಡು ಬನ್ನಿ ಅಂತ ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗೆ ರಾಜಕೀಯ ಬದ್ಧತೆ ಇದ್ದರೆ ಪಕ್ಷದ ಗೌರವ ಉಳಿಸುಕೊಳ್ಳುವುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪದ ಬಗ್ಗೆ ಕೇಂದ್ರ ಸರ್ಕಾರದ ಏಜೆನ್ಸಿಯವರು ತನಿಖೆ ಮಾಡಬೇಕು. ಯತ್ನಾಳ್‌ರನ್ನು ಕೂಡಲೇ ವಶಕ್ಕೆ ಪಡೆಯಬೇಕು. ಅವರನ್ನು ಸಾಕ್ಷಿಯಾಗಿಸಿಕೊಂಡು ತನಿಖೆ ಮಾಡಬೇಕು. ನಳಿನ್ ಕುಮಾರ್ ಕಟೀಲ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ” ಎಂದು ಆರೋಪಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ಮಾಡಿದರೆ ಅವರಿಗೆ ನೋಟಿಸ್ ಕೊಟ್ಟಿದ್ದೀರಿ. ಬಸನಗೌಡ ಪಾಟೀಲ್ ಯತ್ನಾಳ್‌ಗೆ ಯಾಕೆ ನೋಟಿಸ್ ಕೊಟ್ಟಿಲ್ಲ?. ಬಿಜೆಪಿ ಅಧ್ಯಕ್ಷರೇ ಯಾಕೆ ಅಕ್ರಮವನ್ನು ಬಯಲಿಗೆಳೆಯುತ್ತಿಲ್ಲ? ಎಂದು ಪ್ರಶ್ನಿಸಿದರು.