ಮನೆ ರಾಜ್ಯ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ ರಚನೆ: ಸರ್ಕಾರದಿಂದ ಅಧಿಕೃತ ಆದೇಶ

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ ರಚನೆ: ಸರ್ಕಾರದಿಂದ ಅಧಿಕೃತ ಆದೇಶ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಪ್ರಾಧಿಕಾರ ಹಾಗೂ ತಾಲೂಕು ಮತ್ತು ಬಿಬಿಎಂಪಿ ಮಟ್ಟದಲ್ಲಿ ಅನುಷ್ಠಾನ ಸಮಿತಿ ರಚಿಸಲು ನಿರ್ಧರಿಸಿದೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.


ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಮೇಲ್ವಿಚಾರಣೆಗೆ ರಾಜ್ಯ ಮಟ್ಟದ ಕಾರ್ಯವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಅಗತ್ಯ ನೀತಿ, ಸುಧಾರಣೆಗಳು, ಅನುಷ್ಠಾನದ ವಿಧಾನಗಳಲ್ಲಿ ಸರಳೀಕರಣ ತರಲು ಹಾಗೂ ತಳಮಟ್ಟದಲ್ಲಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಪ್ರಾಧಿಕಾರಗಳನ್ನು ಮತ್ತು ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಲು ಇದೇ ತಿಂಗಳು 17 ರಂದು ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಮಟ್ಟದಲ್ಲಿ ‘ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’, ಜಿಲ್ಲಾ ಮಟ್ಟದಲ್ಲಿ ‘ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲ್ಲೂಕು ಮಟ್ಟದಲ್ಲಿ ‘ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ ಹಾಗೂ ಬಿಬಿಎಂಪಿ ಮಟ್ಟದಲ್ಲಿ ‘ಬಿಬಿಎಂಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ’ ರಚಿಸಲು ಸರ್ಕಾರವು ನಿರ್ಧರಿಸಿ ಆದೇಶಿಸಿದೆ.

ರಾಜ್ಯದ ಜಿಲ್ಲೆಗಳನ್ನು ಐದು ವಿಭಾಗಗಳನ್ನಾಗಿ ವಿಂಗಡಿಸಿ, ರಾಜ್ಯ ಮಟ್ಟದ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳಿಗೆ ಪ್ರತಿಯೊಂದು ವಿಭಾಗಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಸದಸ್ಯ ಕಾರ್ಯದರ್ಶಿಯವರು ಆದೇಶ ಹೊರಡಿಸಬೇಕು.

ಸದಸ್ಯ ಕಾರ್ಯದರ್ಶಿಯವರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಇತರೆ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿಯವರನ್ನು ರಾಜ್ಯ ಮಟ್ಟದ ಅನುಷ್ಠಾನ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಬೇಕು. ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸದಸ್ಯ ಕಾರ್ಯದರ್ಶಿರವರು ಸಕ್ಷಮ ಪ್ರಾಧಿಕಾರದ (ಸರ್ಕಾರದ) ಅನುಮೋದನೆ ಪಡೆದು ನೇಮಿಸಬೇಕು.

ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಗಳು ಹಾಗೂ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಕಾರ್ಯಗಳು, ಜವಾಬ್ದಾರಿಗಳು, ಅಧಿಕಾರಿ/ಸಿಬ್ಬಂದಿಗಳ ನೇಮಕಾತಿ, ರಾಜೀನಾಮೆ, ಕಛೇರಿ ನಿರ್ವಹಣೆ, ಸವಲತ್ತು, ಗೌರವಧನ, ಭತ್ಯೆಗಳು ಹಾಗೂ ಇತರೆ ಯಾವುದೇ ಸಂಬಂಧಪಟ್ಟ ವಿಷಯಗಳ ಕುರಿತು ಸಕ್ಷಮ ಪ್ರಾಧಿಕಾರದ (ಸರ್ಕಾರದ) ಅನುಮೋದನೆಯೊಂದಿಗೆ ರಾಜ್ಯ ಮಟ್ಟದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಪ್ರತ್ಯೇಕವಾಗಿ ಆದೇಶ ಹೊರಡಿಸಬೇಕು.

ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಮುಖ ಜವಾಬ್ದಾರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯಾಗಿರುತ್ತದೆ ಹಾಗೂ ಈ ಪ್ರಾಧಿಕಾರವು ನೀತಿ ರಚನೆ, ಸುಧಾರಣಾ ಕ್ರಮಗಳು, ಅನುಷ್ಠಾನದಲ್ಲಿ ಸರಳೀಕರಣ ಹಾಗೂ ಸಮನ್ವಯತೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ರಾಜ್ಯ ಮಟ್ಟದ ಅನುಷ್ಠಾನ ಪ್ರಾಧಿಕಾರಕ್ಕೆ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದವರು ಅಧ್ಯಕ್ಷರಾಗಿರುತ್ತಾರೆ. ಸಚಿವ ಸ್ಥಾನಮಾನ ಹೊಂದಿದ ಐವರು ಉಪಾಧ್ಯಕ್ಷರಾಗಿರುತ್ತಾರೆ. 31 ಜಿಲ್ಲೆಗಳಿಗೆ ಪ್ರತಿನಿಧಿಸುವ ಜಿಲ್ಲೆಗೆ ಒಬ್ಬರಂತೆ ಸದಸ್ಯರು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶಿಷ್ಟಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿ ಇರುತ್ತಾರೆ.