ಮನೆ ಮನರಂಜನೆ ಹಳೇ ‘ಹ್ಯಾಂಗೋವರ್’ವುಳ್ಳ‌ ಹೊಸ ‘ಬ್ಯಾಚುಲರ್ಸ್ ಪಾರ್ಟಿ’

ಹಳೇ ‘ಹ್ಯಾಂಗೋವರ್’ವುಳ್ಳ‌ ಹೊಸ ‘ಬ್ಯಾಚುಲರ್ಸ್ ಪಾರ್ಟಿ’

0

‘ದಿ ಹ್ಯಾಂಗ್‌ ಓವರ್‌’ ಎನ್ನುವ ಇಂಗ್ಲಿಷ್‌ ಸಿನಿಮಾವೊಂದಿದೆ.

ಫಿಲ್‌, ಅಲೆನ್‌, ಸ್ಟ್ಯೂ ಎಂಬ ಮೂವರು ಮಿತ್ರರು ಮಾದಕ ವಸ್ತುಗಳ ನಶೆಯಲ್ಲಿ ತಮಗರಿವಿಲ್ಲದಂತೆ ಬೇರೆ ದೇಶಕ್ಕೆ ಹೋಗುತ್ತಾರೆ. ಅಲ್ಲಿನ ಘಟನಾವಳಿಗಳು ಕಥೆಯನ್ನು ಮುಂದುವರಿಸುತ್ತದೆ. ಅಭಿಜಿತ್‌ ಮಹೇಶ್‌ ನಿರ್ದೇಶನದ ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾವೂ ಇದೇ ಎಳೆಯ ಮೇಲೆ ಹೆಣೆದ ಹೊಸ ಕಥೆ. ಹೊಸದೇನಿದೆ ಎಂದರೆ, ಕಥೆಗೆ ಸ್ಥಳೀಯ ಘಮವಿದೆ, ನಗಿಸುವ ಒನ್‌ ಲೈನರ್‌ ಗಳಿವೆ, ಮಿಗಿಲಾಗಿ ಪಯಣಕ್ಕೆ ಅಚ್ಯುತ್‌ ಕುಮಾರ್‌ ಅನುಭವದ ಸಾರವಿದೆ.

ಅಭಿಜಿತ್‌ ಮಹೇಶ್‌ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಪತಿ, ಪತ್ನಿ ನಡುವಿನ ಹೊಂದಾಣಿಕೆಯ ಕೊರತೆಯನ್ನು ವಿಷಯವಾಗಿಟ್ಟುಕೊಂಡು ಕಥೆ ಆರಂಭಿಸಿದ್ದಾರೆ ನಿರ್ದೇಶಕರು. ಸಾಫ್ಟ್‌ ವೇರ್‌ ಎಂಜಿನಿಯರ್‌ ಸಂತೋಷ್‌ ಮಂಚಾಲೆ (ದಿಗಂತ್‌) ಮದುವೆಯಾಗಿ ಆರು ವರ್ಷ ಕಳೆದಿದೆ. ಆದರೆ ಪತಿ-ಪತ್ನಿಯ ನಡುವೆ ಹೊಂದಾಣಿಕೆಯಿಲ್ಲ. ಪತ್ನಿಯೊಂದಿಗೆ ಏರುಧ್ವನಿಯಲ್ಲಿ ಮಾತಾಡಲು ಹಿಂಜರಿಯುವಾತ. ಹೆಸರಿನಲ್ಲಿ ಸಂತೋಷವಿದ್ದರೂ, ಆತ ಸಂತೋಷವಾಗಿಲ್ಲ. ಇಂತಹ ವ್ಯಕ್ತಿಯ ಬದುಕಿನ ದಿನನಿತ್ಯದ ಜಂಜಾಟಗಳನ್ನು ಮೊದಲಾರ್ಧದ ಆರಂಭದಲ್ಲಿ ಹಾಸ್ಯಮಯವಾಗಿ ತೆರೆಗೆ ತರಲಾಗಿದೆ. ಸಂತೋಷ್‌ನ ಶಾಲಾ ಗೆಳೆಯನ ‘ಬ್ಯಾಚುಲರ್‌ ಪಾರ್ಟಿ’ಯಿಂದ ಕಥೆ ಮುಂದಡಿ ಇಡುತ್ತದೆ. ಸಂತೋಷ್‌ ದೂರವಿಡಲು ಯತ್ನಿಸಿದ ಗೆಳೆಯ ಮ್ಯಾಡಿ (ಯೋಗಿ) ಆತನ ಜೀವನಕ್ಕೆ ಪ್ರವೇಶಿಸಿದ ಬಳಿಕ ಸಾಗುವ ಪಯಣವೇ ಈ ಸಿನಿಮಾ.

ಒನ್‌ ಲೈನರ್‌ ಗಳ ಮೂಲಕವೇ ನಗಿಸುವ ಸಿನಿಮಾ ಇದಾಗಿದೆ. ಬ್ಯಾಂಕಾಕ್‌ಗೆ ಚಿತ್ರಕಥೆ ಅಡಿಇಟ್ಟ ಬಳಿಕ ಕಥೆಗೊಂದಿಷ್ಟು ವೇಗ ಸಿಗುತ್ತದೆ. ಇಲ್ಲಿ ಸಂತೋಷ್‌, ಮ್ಯಾಡಿಗೆ, ಅವರ ಪಿ.ಟಿ. ಟೀಚರ್‌ (ಅಚ್ಯುತ್‌ ಕುಮಾರ್‌) ಜೊತೆಯಾಗುತ್ತಾರೆ. ಭಿನ್ನವಾದ ಪಾತ್ರವೊಂದರಲ್ಲಿ ಅಚ್ಯುತ್‌ ಇಲ್ಲಿ ಗಮನ ಸೆಳೆಯುತ್ತಾರೆ. ಅವರ ನಟನೆಯಲ್ಲಿ ಹೊಸ ಘಮ ಕಾಣಬಹುದು. ಅನುಭವದ ಸಾರವಿದೆ. ನಗಿಸುತ್ತಾ, ಸಣ್ಣಗೆ ಕಣ್ಣು ತೇವಗೊಳಿಸುತ್ತಾ ಅವರಿಲ್ಲಿ ಗಮನ ಸೆಳೆಯುತ್ತಾರೆ. ಸಂತೋಷ್‌ ಪಾತ್ರದಲ್ಲಿ ದಿಗಂತ್‌ ಇಷ್ಟವಾಗುತ್ತಾರೆ. ನಗಿಸುವ ಹೊಣೆ ಹೊತ್ತು ಬರುವ ಯೋಗಿ, ತಮ್ಮ ಮಾತಿನ ಧಾಟಿಯಿಂದಲೇ ನಗುವಿನೌತಣ ಬಡಿಸುತ್ತಾರೆ. ಮಹಿಳಾ ಪಾತ್ರಗಳ ಬರವಣಿಗೆಯು ನಗು ಹುಟ್ಟಿಸಲು ನಿರ್ದೇಶಕರು ಮಾಡಿದ ವಿಫಲ ಯತ್ನ.

 ಅಚ್ಯುತ್‌ ಕುಮಾರ್‌ ಪಾತ್ರ ಅನುಭವಿಸಿದ ಪ್ರೀತಿ, ಮ್ಯಾಡಿ ಕಂಡುಕೊಂಡ ಪ್ರೀತಿ, ಸಂತೋಷ್‌ಗೆ ದೊರಕಿದ ಪ್ರೀತಿಯನ್ನು ಇಲ್ಲಿ ಕಾಣಬಹುದು. ಮ್ಯಾಡಿ ಪಾತ್ರದ ಪರಿಚಯಕ್ಕೆ ಹಾಗೂ ಆತನ ಪ್ರೀತಿಗೆ ರಚಿಸಿದ ಹಾಡುಗಳು ಚೆನ್ನಾಗಿವೆ. ಕ್ಯಾಮೆರಾ ಹಿಂದೆ ಅರವಿಂದ್‌ ಕಶ್ಯಪ್‌ ಕೈಚಳಕ ಕಾಣಬಹುದು.

ಬ್ಯಾಂಕಾಕ್‌ನಲ್ಲಿನ ಚೇಸ್‌ ದೃಶ್ಯಕ್ಕೆ ಕತ್ತರಿ ಹಾಕಿ, ನಗುವಿನ ಓಟದ ಭರಾಟೆ ನಡುವೆ ಭಾವನೆಗಳಿಗೆ ಒಂದಿಷ್ಟು ಜಾಗವನ್ನು ಹೆಚ್ಚು ಮೀಸಲಿಡಬಹುದಿತ್ತು. ಪಾರ್ಟಿಗೆ ಬಂದವರು ಪಾಸ್‌ ಪೋರ್ಟ್‌ ತರ್ತಾರಾ? ಗುಂಡಿಗೆ ಬಿದ್ದ ಪಿ.ಟಿ. ಟೀಚರ್‌ ಬದುಕಿದ್ದು ಹೇಗೆ? ಹೀಗೆ ಲಾಜಿಕ್‌ ಇಲ್ಲದ ಒಂದೆರಡು ಸನ್ನಿವೇಶಗಳು ಖಂಡಿತಾ ಇವೆ. ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಕ್ಲೈಮ್ಯಾಕ್ಸ್‌ ಪ್ರಿಯದರ್ಶನ್‌ ಅವರ ಸಿನಿಮಾಗಳನ್ನು ನೆನಪಿಸುತ್ತದೆ. ‘ಜಾನಿ’ ಮೇಲೆ ನಿರ್ದೇಶಕರಿಗೆ ಯಾಕಷ್ಟು ಪ್ರೀತಿ! ಎನ್ನುವ ಪ್ರಶ್ನೆ ಕೊನೆಗೂ ಉಳಿಯುತ್ತದೆ.